ತಾಯಿಯ ಕೊಲೆಯಲ್ಲಿ ಅಂತ್ಯವಾಯ್ತು ಮಗಳ ವಾಟ್ಸಾಪ್ ಸ್ಟೇಟಸ್ ಗಲಾಟೆ !

Prasthutha|

ಪಾಲ್ಘರ್: ಕಾಲೇಜು ವಿದ್ಯಾರ್ಥಿನಿಯೊಬ್ಬಳು ಹಾಕಿದ್ದ ವಾಟ್ಸಾಪ್ ಸ್ಟೇಟಸ್  ಹಿನ್ನೆಲೆಯಲ್ಲಿ, ಎರಡು ಕುಟುಂಬಗಳ ನಡುವೆ ಆರಂಭವಾದ ಜಗಳ ವಿದ್ಯಾರ್ಥಿನಿಯ ತಾಯಿಯ ಅಮೂಲ್ಯ ಜೀವವನ್ನೇ ಬಲಿ ಪಡೆದ ಘಟನೆ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ಶಿವಾಜಿನಗರದಲ್ಲಿ ನಡೆದಿದೆ.

- Advertisement -

ಮೃತ ಮಹಿಳೆಯನ್ನು ಬೊಯ್ಸರ್ ನಿವಾಸಿ ಲೀಲಾವತಿ ದೇವಿ ಪ್ರಸಾದ್ [48] ಎಂದು ಗುರುತಿಸಲಾಗಿದೆ.

ಲೀಲಾವತಿಯ ಮಗಳು, ಕಾಲೇಜು ವಿದ್ಯಾರ್ಥಿನಿಯಾಗಿರುವ ಪ್ರೀತಿ ಪ್ರಸಾದ್  [20] ತನ್ನ ವಾಟ್ಸಾಪ್’ನಲ್ಲಿ ಹಾಕಿದ್ದ ಸ್ಟೇಟಸ್ ಪಕ್ಕದ ಮನೆಯ 17 ವರ್ಷ ಪ್ರಾಯದ ಸ್ನೇಹಿತೆಯ ಕೋಪಕ್ಕೆ ಕಾರಣವಾಗಿತ್ತು. ಸ್ಟೇಟಸ್ ವಿಚಾರವನ್ನು ಮುಂದಿಟ್ಟುಕೊಂಡು ಅಪ್ರಾಪ್ತ ಬಾಲಕಿ ತನ್ನ ತಾಯಿ ಸಹೋದರ, ಸಹೋದರಿಯರ ಜೊತೆ  ಪ್ರೀತಿ ಪ್ರಸಾದ್ ಮನೆಗೆ ಬಂದು ವಾಟ್ಸಾಪ್ ಸ್ಟೇಟಸ್ ಕುರಿತು ಪ್ರಶ್ನಿಸಿದ್ದಳು. ಆದರೆ ಮಾತಿನ ಚಕಮಕಿ ವಿಕೋಪಕ್ಕೆ ತೆರಳಿ ಪಕ್ಕದ ಮನೆಯವರೆಲ್ಲರೂ ಸೇರಿ ಪ್ರೀತಿ ಪ್ರಸಾದ್ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಈ ವೇಳೆ ತಡೆಯಲು ಬಂದ ಪ್ರೀತಿಯ ತಾಯಿ ಲೀಲಾವತಿ ಮೇಲೂ ಹಲ್ಲೆ ನಡೆಸಲಾಗಿದೆ. ಹಲ್ಲೆಯಿಂದಾಗಿ  ಲೀಲಾವತಿಯವರ ಪಕ್ಕೆಲುಬುಗಳಿಗೆ ತೀವ್ರವಾದ ಆಂತರಿಕ  ಗಾಯಗಳಾಗಿದ್ದವು. ಕೂಡಲೇ  ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತಾದರೂ ಜೀವ ಉಳಿಸಲಾಗಲಿಲ್ಲ.

- Advertisement -

ಪ್ರೀತಿ ಪ್ರಸಾದ್ ನೀಡಿದ ದೂರಿನ ಆಧಾರದಲ್ಲಿ ಅಪ್ರಾಪ್ತ ಬಾಲಕಿ ಹಾಗೂ ಆಕೆಯ ಮನೆಯವರನ್ನು ಪೊಲೀಸರು ಬಂಧಿಸಿ  ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಹಾಜರುಪಡಿಸಿದ್ದು, ನ್ಯಾಯಾಲಯವು ಮೂರು ದಿನಗಳ ವರೆಗೆ ಪೊಲೀಸ್ ಕಸ್ಟಡಿಗೆ ನೀಡಿದೆ.

ಅದಾಗಿಯೂ ವಾಟ್ಸಾಪ್ ಸ್ಟೇಟಸ್ ಏನಾಗಿತ್ತು ಎಂಬುದನ್ನು ಬಹಿರಂಗಪಡಿಸಲು ಬೋಯ್ಸರ್ ಠಾಣೆಯ ಇನ್ಸ್ಪೆಕ್ಟರ್ ಸುರೇಶ್ ಕದಮ್ ನಿರಾಕರಿಸಿದ್ದು, ವೈಯಕ್ತಿಕ ದ್ವೇಷಕ್ಕೆ ಕಾರಣವಾಗುವಂತಹ ವಿಚಾರ ಸ್ಟೇಟಸ್’ನಲ್ಲಿ ಇರಲಿಲ್ಲ ಎಂದಷ್ಟೇ ಹೇಳಿದ್ದಾರೆ.



Join Whatsapp