ಕೋಲಾರ: ಪರಿಶಿಷ್ಟ ಜಾತಿಯ ಯುವಕನನ್ನು ಪ್ರೀತಿಸುತ್ತಿದ್ದ ಮಗಳನ್ನು ತಂದೆಯೇ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ, ಇದರಿಂದ ಮನನೊಂದ ಪ್ರಿಯಕರ ರೈಲಿನಡಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಮನಕಲಕುವ ಘಟನೆ ಕೋಲಾರದಲ್ಲಿ ನಡೆದಿದೆ.
ಮೃತರನ್ನು ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ಕಾಮಸಮುದ್ರ ಹೋಬಳಿಯ ಬೋಡಗುರ್ಕಿ ಗ್ರಾಮದ ಕೀರ್ತಿ(20), ಹಾಗೂ ಆತ್ಮಹತ್ಯೆ ಮಾಡಿಕೊಂಡವನನ್ನು ಗಂಗಾಧರ್(24) ಎಂದು ಗುರುತಿಸಲಾಗಿದೆ. ಆರೋಪಿ ಯುವತಿ ತಂದೆ ಕೃಷ್ಣಮೂರ್ತಿ(46)ಯನ್ನ ಇದೀಗ ಪೊಲೀಸರು ಬಂಧಿಸಿದ್ದಾರೆ.
ಕೊಲೆಯಾದ ಯುವತಿ ಕೋಲಾರ ಜಿಲ್ಲೆಯ ಕೆಜಿಎಫ್ ಕಾಲೇಜಿನಲ್ಲಿ ದ್ವಿತೀಯ ವರ್ಷದ ಪದವಿ ಓದುತ್ತಿದ್ದಳು. ಇನ್ನು ಪಿಯುಸಿಯಲ್ಲೇ ಅನುತ್ತೀರ್ಣನಾಗಿದ್ದ ಮೃತ ಪ್ರಿಯಕರ ಗಂಗಾಧರ್ ಗಾರೆ ಕೆಲಸ ಮಾಡುತ್ತಿದ್ದ. ಇಬ್ಬರ ಮನೆ ಕೂಡ ಒಂದೇ ಕಡೆಯಿದ್ದು, ಪ್ರೀತಿಸಲು ಶುರು ಮಾಡಿದ್ದು, ಮುಂದೆ ಮದುವೆಯಾಗಲೂ ನಿರ್ಧಾರ ಮಾಡಿದ್ದರು. ಇದಾದ ಬಳಿಕ ವಿಷಯ ಯುವತಿ ತಂದೆಗೆ ತಿಳಿದು ಸೋಮವಾರ ರಾತ್ರಿ ಜಗಳ ನಡೆದಿದೆ. ಈ ವೇಳೆ ಯುವತಿ ಅವನನ್ನೇ ಮದುವೆಯಾಗುವುದಾಗಿ ಹಟ ಹಿಡಿದಿದ್ದಾಳೆ. ಇದರಿಂದ ಕೋಪಗೊಂಡ ತಂದೆ ಮಂಗಳವಾರ ಬೆಳಗಿನ ಜಾವ ಉಸಿರು ಗಟ್ಟಿಸಿ ಕೊಲೆ ಮಾಡಿದ್ದಾನೆ ಎಂದು ಕೆಜಿಎಫ್ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ. ಈ ವಿಷಯ ತಿಳಿದು ಯುವಕ ಮೈಸೂರು ಚೆನ್ನೈ ಎಕ್ಸ್ಪ್ರೆಸ್ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ. ಕಾಮಸಮುದ್ರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.