ದಾನವಾಗಿ ನೀಡಲು ಮಗಳು ಆಸ್ತಿಯಲ್ಲ: ಬಾಬಾಗೆ ಮಗಳನ್ನು ದಾನ ಮಾಡಿದ್ದ ತಂದೆಯನ್ನು ತರಾಟೆಗೆ ತೆಗೆದುಕೊಂಡ ಬಾಂಬೆ ಹೈಕೋರ್ಟ್

Prasthutha|

ಮುಂಬೈ: ಸ್ವಂತ ಮಗಳನ್ನು ಬಾಬಾ ಒಬ್ಬರಿಗೆ ದಾನವಾಗಿ ನೀಡಿರುವ ವಿಚಾರವನ್ನು ಪ್ರಕರಣವೊಂದರ ವಿಚಾರಣೆ ವೇಳೆ ತಿಳಿದ ಬಾಂಬೆ ಹೈಕೋರ್ಟ್‌ನ ಔರಂಗಾಬಾದ್‌ ಪೀಠವು ಈ ಕೃತ್ಯವೆಸಗಿದ ತಂದೆಯನ್ನು ಇತ್ತೀಚೆಗೆ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ದಾನವಾಗಿ ನೀಡಲು ಮಗಳೇನು ಆಸ್ತಿಯೇ? ಎಂದು ನ್ಯಾಯಮೂರ್ತಿ ವಿಭಾ ಕಂಕನವಾಡಿ ಅವರು ಈ ಕುರಿತು ಅಫಿಡವಿಟ್‌ ಸಲ್ಲಿಸಿದ್ದ ತಂದೆಯನ್ನು ಪ್ರಶ್ನಿಸಿದರು.

- Advertisement -

ಅಪ್ರಾಪ್ತ ಯುವತಿಯ ಮೇಲೆ ಅತ್ಯಾಚಾರವೆಸಗಿದ ಆರೋಪದಲ್ಲಿ ಜಾಮೀನು ಕೋರಿದ್ದ ಇಬ್ಬರು ಆರೋಪಿಗಳ ಅರ್ಜಿ ವಿಚಾರಣೆ ವೇಳೆ ಯುವತಿಯನ್ನು ಬಾಬಾ ಒಬ್ಬರಿಗೆ ನ್ಯಾಯಾಲಯಕ್ಕೆ ದಾನವಾಗಿ ನೀಡಿರುವ ಸಂಗತಿ ತಿಳಿದು ಬಂದಿತು.

“ಯುವತಿಯ ಸ್ವಯಂ ಹೇಳಿಕೆಯಂತೆ ಆಕೆ ಅಪ್ರಾಪ್ತೆ. ಹೀಗಿರುವಾಗ, ಎಲ್ಲ ರೀತಿಯಲ್ಲೂ ಆಕೆಯ ರಕ್ಷಕನಾದ ತಂದೆಯು ಹೇಗೆ ಆಕೆಯನ್ನು ದಾನವಾಗಿ ನೀಡಲು ಸಾಧ್ಯ? ದಾನವಾಗಿ ನೀಡಲು ಮಗಳೇನು ಆಸ್ತಿಯಲ್ಲ,” ಎಂದು ನ್ಯಾಯಾಲಯವು ತಂದೆಯನ್ನು ತರಾಟೆಗೆ ತೆಗೆದುಕೊಂಡಿತು.

- Advertisement -

ಸೂಕ್ತ ರೀತಿಯಲ್ಲಿ ದತ್ತಕ ಪತ್ರವನ್ನು ಕಾರ್ಯಗತಗೊಳಿಸಿಲ್ಲದ, ಕ್ರಮಬದ್ಧವಾದ ಪ್ರಕ್ರಿಯೆಯನ್ನು ಅನುಸರಿಸದ ಹಿನ್ನೆಲೆಯಲ್ಲಿ ಅಪ್ರಾಪ್ತ ಯುವತಿಯ ಭವಿಷ್ಯದ ಬಗ್ಗೆ ಕಾಳಜಿ ವ್ಯಕ್ತಪಡಿಸಿದ ನ್ಯಾಯಾಲಯವು ತಾನು ಈ ವಿಚಾರದಲ್ಲಿ ಕಣ್ಣು ಮುಚ್ಚಿ ಕೂರಲು ಸಾಧ್ಯವಿಲ್ಲ ಎಂದಿತು.

ಯುವತಿಯನ್ನು ಯಾವುದೇ ರೀತಿಯ ಅಕ್ರಮ ಚಟುವಟಿಕೆಗಳಿಗೆ ತಳ್ಳದಂತೆ ರಕ್ಷಿಸುವ ದೃಷ್ಟಿಯಿಂದ ಮಧ್ಯಪ್ರವೇಶ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟ ಪೀಠವು ಪ್ರಕರಣದ ಬಗ್ಗೆ ತನಿಖೆ ಕೈಗೊಳ್ಳುವಂತೆ ಮಕ್ಕಳ ಕಲ್ಯಾಣ ಸಮಿತಿಗೆ ಸೂಚಿಸಿತು. ತನಿಖೆಯನ್ನು ತ್ವರಿತವಾಗಿ ಕೈಗೊಂಡು ಯುವತಿಯು ಆರೈಕೆ ಮತ್ತು ರಕ್ಷಣೆಯು ಅಗತ್ಯವಿರುವ ಅಪ್ರಾಪ್ತೆಯೇ ಎನ್ನುವ ಬಗ್ಗೆ ತಿಳಿಸುವಂತೆ ಸೂಚಿಸಿತು. ನ್ಯಾಯಾಲಯದ ಆದೇಶದಂತೆ ತ್ವರಿತವಾಗಿ ತನಿಖೆ ಕೈಗೊಂಡ ಸಮಿತಿಯು ಈ ಕುರಿತು ವರದಿ ಸಲ್ಲಿಸಿದೆ. ಪ್ರಕರಣದ ಮುಂದಿನ ವಿಚಾರಣೆ ಫೆಬ್ರವರಿ 4ರಂದು ನಡೆಯಲಿದೆ.

ಇನ್ನು ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿಂತೆ ತನಿಖೆಯು ಮುಗಿದಿದ್ದು ಆರೋಪಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿರುವ ಹಿನ್ನೆಲೆಯಲ್ಲಿ ಅರೋಪಿಗಳನ್ನು ಬಂಧನದಲ್ಲಿರಿಸುವ ಅಗತ್ಯವಿಲ್ಲ ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿತು. ಈ ಹಿನ್ನೆಲೆಯಲ್ಲಿ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿತು.

Join Whatsapp