Home ಟಾಪ್ ಸುದ್ದಿಗಳು ಉತ್ತರ ಪ್ರದೇಶದಲ್ಲಿ ದಲಿತ ಟೆಕ್ಕಿಯನ್ನು ಥಳಿಸಿ ಗಡ್ಡ ಬೋಳಿಸಿದ ಠಾಕೂರರು

ಉತ್ತರ ಪ್ರದೇಶದಲ್ಲಿ ದಲಿತ ಟೆಕ್ಕಿಯನ್ನು ಥಳಿಸಿ ಗಡ್ಡ ಬೋಳಿಸಿದ ಠಾಕೂರರು

ಲಖ್ನೋ: ದಲಿತ ಯುವಕನೊಬ್ಬನಿಗೆ ಚಾಕು ತೋರಿಸಿ, ಬೆದರಿಸಿದ ಠಾಕೂರ್ ಗುಂಪೊಂದು ಆತನ ಗಡ್ಡ ಬೋಳಿಸಿ ಅವಮಾನಿದ ಘಟನೆ ಉತ್ತರ ಪ್ರದೇಶದ ಶಹರಾನ್ ಪುರದಲ್ಲಿ ನಡೆದಿದೆ.

20ರ ಹರೆಯದ ರಜತ್ ಕುಮಾರ್  ಸಂತ್ರಸ್ತ ಯುವಕನಾಗಿದ್ದಾನೆ. ದಲಿತ ಗಡ್ಡ ಬಿಡುವುದು ಠಾಕೂರರಿಗೆ ಅವಮಾನ ಎಂದು ಗುಂಪು ಹೇಳಿದೆ.

ಬೆದರಿ ಕುಳಿತಿದ್ದ ರಜತ್ ಐದು ದಿನಗಳ ಬಳಿಕ ಧೈರ್ಯ ತಂದುಕೊಂಡು ಪೊಲೀಸರಿಗೆ ದೂರಿತ್ತಿರುವುದಾಗಿ ಕುಟುಂಬದವರು ತಿಳಿಸಿದ್ದಾರೆ.

ಠಾಕೂರರು ತಮ್ಮ ಕೆಟ್ಟ ಸಾಹಸವನ್ನು ವೀಡಿಯೋ ಮಾಡಿ ಜಾಲ ತಾಣದಲ್ಲಿ ಹಾಕಿದ್ದು ವೈರಲ್ ಆಗಿದೆ. ಗಡ್ಡ ಬೋಳಿಸುವ ಕೆಲಸ ಮಾಡಿದ ಬಾರ್ಬರ್ ಸಹಿತ ಆರು ಜನರ ಮೇಲೆ ಪೊಲೀಸರು ಎಸ್ ಸಿ/ ಎಸ್ ಟಿ ಕಾಯ್ದೆಯಡಿ ಮೊಕದ್ದಮೆ ದಾಖಲಿಸಿದ್ದಾರೆ.

ಟೆಕ್ಕಿ ರಜತ್ ತನ್ನೂರು ಶಿಮ್ಲಾದಿಂದ ಬರುವಾಗ ನೀರಜ್ ರಾಣಾ, ಸತ್ಯಂ ರಾಣಾ, ಮೋಕಂ ರಾಣಾ, ರಿಪಂತು ರಾಣಾ, ಮಾಂಟಿ ರಾಣಾ ಮತ್ತು ಸಂದೀಪ್ ರಾಣಾ ಆತನನ್ನು ಸುತ್ತುವರಿದು ನಿಂದಿಸಿ, ಹಲ್ಲೆ ನಡೆಸಿದ್ದಾರೆ. ಕೊಲ್ಲುವುದಾಗಿ ಬೆದರಿಸುತ್ತ ಆತನನ್ನು ಸೆಲೂನಿಗೆ ಎಳೆದೊಯ್ದ ಗುಂಪು, ಜಾತಿ ನಿಂದನೆ ಮಾಡಿ, ಬಲವಂತವಾಗಿ ಗಡ್ಡ ಬೋಳಿಸುವಂತೆ ಮಾಡಿದ್ದಾರೆ ಎಂದು ರಜತ್ ತನ್ನ ದೂರಿನಲ್ಲಿ ಹೇಳಿದ್ದಾರೆ.

ಬಲವಂತದಿಂದ ಗಡ್ಡ ಬೋಳಿಸಿದ್ದನ್ನು ವೀಡಿಯೋ ಮಾಡಿಕೊಂಡಿರುವುದನ್ನು ಪೋಲೀಸರು ಅಂತರ್ಜಾಲದಲ್ಲಿ ಗಮನಿಸಿದ್ದಾರೆ. ಠಾಕೂರರಂತೆ ಗಡ್ಡ ಬಿಡಲು ಹೀನ ಜಾತಿಯ ನಿನಗೆ ಎಷ್ಟು ಧೈರ್ಯ ಎಂದು ಜಾತಿ ಹೆಸರು ಹೇಳಿ ನಿಂದಿಸಿದ್ದಾರೆ. ಅಲ್ಲದೆ ಪೊಲೀಸರಿಗೆ ದೂರಿದರೆ ನಿನ್ನನ್ನು ಮತ್ತು ನಿನ್ನ ಕುಟುಂಬವನ್ನು ಜೀವಂತ ಸುಡುವುದಾಗಿ ಬೆದರಿಕೆ ಹಾಕಿರುವುದನ್ನೂ ದೂರಿನಲ್ಲಿ ಹೇಳಲಾಗಿದೆ. ಈ ವಿವರಗಳನ್ನು ರಜತ್ ಅಣ್ಣ ಸೋನು ಕುಮಾರ್ ಪತ್ರಿಕೆಗಳಿಗೆ ತಿಳಿಸಿದ್ದಾರೆ. ಮರುದಿನ ಬಲವಂತದಿಂದ ಗಡ್ಡ ಬೋಳಿಸಿದ್ದನ್ನು ದಾಳಿ ನಡೆಸಿದವನೊಬ್ಬ ವಾಟ್ಸ್ಆಪ್ ಗ್ರೂಪಿಗೆ ಹಾಕಿದ್ದು ಈಗ ದೊಡ್ಡ ಸಾಕ್ಷ್ಯವಾಗಿದೆ.

Join Whatsapp
Exit mobile version