ಭೋಪಾಲ್ : ಮಧ್ಯಪ್ರದೇಶದ ದಾಟಿಯಾ ಜಿಲ್ಲೆಯ ದಲಿತ ಕುಟುಂಬವೊಂದರ ಮೇಲೆ ಯಾದವ ಸಮುದಾಯದ ಗುಂಪೊಂದು ಹಲ್ಲೆ ನಡೆಸಿ, ಮನೆಯನ್ನು ಸುಟ್ಟು ಹಾಕಿದೆ. 2 ವರ್ಷಗಳ ಹಿಂದಿನ ಪೊಲೀಸ್ ಪ್ರಕರಣ ಹಿಂಪಡೆಯಲು ನಿರಾಕರಿಸಿದಕ್ಕಾಗಿ ದಲಿತ ಸಮುದಾಯದ ಇಬ್ಬರು ಸಹೋದರರನ್ನು ಥಳಿಸಲಾಗಿದೆ.
ವೇತನ ಪಾವತಿಯ ವ್ಯತ್ಯಾಸಕ್ಕೆ ಸಂಬಂಧಿಸಿ ಸಂದೀಪ್ ದೋಹರೆ ಮತ್ತು ಅವರ ಸಹೋದರ ಸಂತ್ರಾಮ್ ದೋಹರೆ ಎಂಬವರು ಪವನ್ ಯಾದವ್ ಎಂಬಾತನ ವಿರುದ್ಧ ದಲಿತ ದೌರ್ಜನ್ಯ ತಡೆ ಕಾಯ್ದೆಯಡಿ 20018ರಲ್ಲಿ ಪ್ರಕರಣ ದಾಖಲಿಸಿದ್ದರು.
ಪವನ್ ಯಾದವ್ ಕುಟುಂಬವು ಪ್ರಕರಣ ಹಿಂಪಡೆಯುವಂತೆ ದೋಹರೆ ಸಹೋದರರ ಮೇಲೆ ಆಗಾಗ ಒತ್ತಡ ತರುತಿತ್ತು ಮತ್ತು ಬೆದರಿಕೆ ಹಾಕುತಿತ್ತು ಎನ್ನಲಾಗಿದೆ. ಆದರೆ, ದಲಿತ ಸಹೋದರರು ಇದಕ್ಕೆ ಒಪ್ಪಿರಲಿಲ್ಲ. ಇದರಿಂದ ಕೋಪಗೊಂಡ ಪವನ್ ಯಾದವ್ ಮತ್ತು ಆತನ ಕುಟುಂಬ ದೋಹರೆ ಸಹೋದರರಿಗೆ ರೈಫಲ್ ಬಟ್ ಗಳಿಂದ ಹೊಡೆದು, ಮನೆಗೆ ಬೆಂಕಿ ಹಚ್ಚಿದ್ದಾರೆ ಎಂದು ವರದಿಯಾಗಿದೆ.
ದುಷ್ಕರ್ಮಿಗಳನ್ನು ಪವನ್ ಯಾದವ್, ಕಲ್ಲು ಯಾದವ್, ಆತನ ನಾಲ್ವರು ಸಂಬಂಧಿಕರು ಮತ್ತು ನರೆಮನೆಯವರು ಎಂದು ಗುರುತಿಸಲಾಗಿದೆ. ಐದು ಮೋಟಾರ್ ಸೈಕಲ್ ಗಳಲ್ಲಿ ಬಂದ 10-12 ಜನರ ಗುಂಪು ಈ ದುಷ್ಕೃತ್ಯದಲ್ಲಿ ಭಾಗಿಯಾಗಿದ್ದಾರೆ. ನಂತರ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.