Home ಕರಾವಳಿ ದಕ್ಷಿಣ ಕನ್ನಡ: ಲೋಕ ಸಭಾ ಚುನಾವಣೆ ಸಂಬಂಧವಾದ ಸಂಪೂರ್ಣ ಮಾಹಿತಿ

ದಕ್ಷಿಣ ಕನ್ನಡ: ಲೋಕ ಸಭಾ ಚುನಾವಣೆ ಸಂಬಂಧವಾದ ಸಂಪೂರ್ಣ ಮಾಹಿತಿ

ಮಂಗಳೂರು: ಸಭೆ, ಸಮಾರಂಭ ನಡೆಸುವ ಸಾರ್ವಜನಿಕರು ಮತ್ತು ರಾಜಕೀಯ ಪಕ್ಷದವರು ಚುನಾವಣಾಧಿಕಾರಿ ಅಥವಾ ಸಹಾಯಕ ಚುನಾವಣಾಧಿಕಾರಿಗಳ ಅನುಮತಿ ಪಡೆದುಕೊಳ್ಳಬೇಕು.

ಧಾರ್ಮಿಕ ಕಾರ್ಯಕ್ರಮಗಳು, ರಾಜಕೀಯ ಸಭೆ, ಪ್ರಚಾರ ಸಭೆಗಳನ್ನು ನಡೆಸಲು ಸಾರ್ವಜನಿಕರು ಅನುಮತಿ ಪಡೆದುಕೊಳ್ಳಬೇಕು. ಇದಕ್ಕಾಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಏಕಗವಾಕ್ಷಿ ಕೇಂದ್ರ ತೆರೆಯಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರವಾರು ಫ್ಲೈಯಿಂಗ್ ಸ್ಕ್ವಾಡ್, ಸ್ಟಾಟಿಕ್ ಸರ್ವೈಲೆನ್ಸ್ ಟೀಮ್, ವಿಡಿಯೊ ಸರ್ವೈಲೆನ್ಸ್ ಟೀಮ್ ರಚಿಸಲಾಗಿದೆ. ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳು ಕಂಡುಬಂದಲ್ಲಿ ದೂರು ದಾಖಲಿಸಲು ಅವಕಾಶವಿದೆ.

ಒಟ್ಟು ಮತದಾರರ ಸಂಖ್ಯೆ 17,96,826. ಇವರಲ್ಲಿ ಪುರುಷರು 8,77,438, ಮಹಿಳೆಯರು 9,19,321. ತೃತೀಯ ಲಿಂಗಿ ಮತದಾರರು 67. ಮೊದಲ ಬಾರಿ 35,689 ಮಂದಿ ಮತ ಚಲಾಯಿಸಲಿದ್ದಾರೆ. ಇವರಲ್ಲಿ ಯುವಕರು 18,310. ಯುವತಿಯರು 17,376. ತೃತೀಯ ಲಿಂಗಿಗಳು 3. ಹಿರಿಯ ಮತದಾರರ ಪೈಕಿ 85 ವರ್ಷಕ್ಕೆ ಮೇಲ್ಪಟ್ಟವರು 13,159 ಮಂದಿ ಇದ್ದಾರೆ. 90 ವರ್ಷಕ್ಕೆ ಮೇಲ್ಪಟ್ಟವರು 8,269, ಶತಾಯುಷಿಗಳು 459, ಒಟ್ಟು 21,887 ಮತದಾರರಿದ್ದಾರೆ. ಹಾಗೆಯೇ 14,195 ಅಂಗವಿಕಲ ಮತದಾರರು ಇದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 1876 ಮತಗಟ್ಟೆಗಳಿವೆ. ಬೆಳ್ತಂಗಡಿಯಲ್ಲಿ 241, ಮೂಡುಬಿದಿರೆಯಲ್ಲಿ 219, ಮಂಗಳೂರು ನಗರ ಉತ್ತರದಲ್ಲಿ 254, ದಕ್ಷಿಣದಲ್ಲಿ 249, ಮಂಗಳೂರಿನಲ್ಲಿ 210, ಬಂಟ್ವಾಳದಲ್ಲಿ 249, ಪುತ್ತೂರಿನಲ್ಲಿ 221, ಸುಳ್ಯದಲ್ಲಿ 233 ಮತಗಟ್ಟೆಗಳು ಇವೆ.

ಚುನಾವಣಾ ಅಧಿಸೂಚನೆ ಹೊರಡಿಸುವ ದಿನಾಂಕ ಮಾರ್ಚ್ 28. ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ ಏಪ್ರಿಲ್ 4. ನಾಮಪತ್ರ ಪರಿಶೀಲನೆ ದಿನಾಂಕ ಏಪ್ರಿಲ್ 5. ಉಮೇದುವಾರಿಕೆ ಹಿಂತೆಗೆದುಕೊಳ್ಳಲು ಕೊನೆಯ ದಿನಾಂಕ ಏಪ್ರಿಲ್ 8. ಚುನಾವಣೆ ದಿನಾಂಕ ಏಪ್ರಿಲ್ 26. ಮತ ಎಣಿಕೆ ಜೂನ್ 4.

ಬೆಳ್ತಂಗಡಿಗೆ ಕೆಂಪೇಗೌಡ ಎಚ್, ಮೂಡಿಬಿದಿರೆಗೆ ಕೆ.ರಾಜು, ಮಂಗಳೂರು ನಗರ ಉತ್ತರಕ್ಕೆ ಕೆ.ಜಾನ್ಸನ್, ಮಂಗಳೂರು ನಗರ ದಕ್ಷಿಣಕ್ಕೆ ಗಿರೀಶ್ ನಂದನ್, ಮಂಗಳೂರು – ಹರ್ಷವರ್ಧನ, ಬಂಟ್ವಾಳಕ್ಕೆ ಉದಯ ಶೆಟ್ಟಿ, ಪುತ್ತೂರಿಗೆ ಜುಬಿನ್ ಮಹಾಪಾತ್ರ, ಸುಳ್ಯಕ್ಕೆ ಡಾ. ಜಗದೀಶ್ ಕೆ ನಾಯ್ಕ್ ಸಹಾಯಕ ಚುನಾವಣಾಧಿಕಾರಿಗಳು.

ಈಗಾಗಲೇ ಎಂಟು ಮಾದರಿ ನೀತಿ ಸಂಹಿತೆ ತಂಡಗಳು, 24 ವಿಡಿಯೋ ವಿಚಕ್ಷಣ ತಂಡಗಳು, 8 ವಿಡಿಯೋ ಪರಿಶೀಲನಾ ತಂಡ, 72 ಫ್ಲೈಯಿಂಗ್ ಸ್ಕ್ವ್ಯಾಡ್, 186 ಸೆಕ್ಟರ್ ಅಧಿಕಾರಿಗಳ ತಂಡ ರಚನೆಗೊಂಡಿದ್ದು, 23 ಚೆಕ್ ಪೋಸ್ಟ್ ರಚಿಸಲಾಗಿದೆ. 9 ಅಂತಾರಾಜ್ಯ, 7 ಅಂತರ್ಜಿಲ್ಲಾ ಹಾಗೂ 7 ಸ್ಥಳೀಯ ಚೆಕ್ ಪೋಸ್ಟ್ ಗಳಿವೆ. ದೂರುಗಳಿಗೆ ಟೋಲ್ ಫ್ರೀ ಸಂಖ್ಯೆ 1950 ಸಂಪರ್ಕಿಸಬಹುದು.

ದಕ್ಷಿಣ ಕನ್ನಡ ಜಿಲ್ಲೆ ಕಾಂಗ್ರೆಸ್ ಮತ್ತು ಬಿಜೆಪಿ ನೇರ ಸ್ಪರ್ಧೆಯ ಕ್ಷೇತ್ರ ಆಗಿದೆ.

Join Whatsapp
Exit mobile version