ನವದೆಹಲಿ: ದಾದಾಪೀರ್ ಜೈಮನ್ ಮತ್ತು ತಮ್ಮಣ್ಣ ಬೀಗಾರ ಅವರು 2022ರ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿಯ ದಾದಾಪೀರ್ ಜೈಮನ್ ಅವರು ಯುವ ಸಾಹಿತ್ಯ ಪ್ರಶಸ್ತಿಗೆ ಹಾಗೂ ಶಿರಸಿಯ ಸಿದ್ದಾಪುರದ ತಮ್ಮಣ್ಣ ಬೀಗಾರ ಅವರು ಬಾಲ ಸಾಹಿತ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ದಾದಾಪೀರ್ ಅವರ ‘ನೀಲಕುರಿಂಜಿ’ ಕಥಾ ಸಂಕಲನಕ್ಕೆ ಹಾಗೂ ತಮ್ಮಣ್ಣ ಬೀಗಾರ ಅವರ ‘ಬಾವಲಿ ಗುಹೆ’ ಮಕ್ಕಳ ಕಾದಂಬರಿಗೆ ಈ ಮಹತ್ತರ ಪ್ರಶಸ್ತಿ ದೊರೆತಿದೆ.
ಡಿಸೆಂಬರ್ ತಿಂಗಳಲ್ಲಿ ದೆಹಲಿಯಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಕೇಂದ್ರ ಸಾಹಿತ್ಯ ಅಕಾಡೆಮಿಯ ಕನ್ನಡ ಸಲಹಾ ಸಮಿತಿಯ ಸಂಯೋಜಕ ಡಾ. ಸರಜೂ ಕಾಟ್ಕರ್ ಅವರ ಉಸ್ತುವಾರಿಯಲ್ಲಿ ಆಯ್ಕೆ ಪ್ರಕ್ರಿಯೆ ನಡೆದಿದೆ.
ಪ್ರಶಸ್ತಿ ವಿಜೇತರನ್ನು ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಡಾ ಚಂದ್ರಶೇಖರ ಕಂಬಾರ ಅವರು ಅಭಿನಂದಿಸಿದ್ದಾರೆ.