ಬೆಂಗಳೂರು: ಅಕ್ರಮ ಗ್ಯಾಸ್ ರೀಫಿಲ್ಲಿಂಗ್ ವೇಳೆ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಬಾಲಕನೋರ್ವ ಸಾವನ್ನಪ್ಪಿರುವ ದಾರಣ ಘಟನೆ ಹೆಬ್ಬಾಳದ ಗುಡ್ಡದಹಳ್ಳಿಯಲ್ಲಿ ನಡೆದಿದೆ.
ಯಾದಗಿರಿ ಜಿಲ್ಲೆಯ ರಾಮಸಮುದ್ರ ಮೂಲದ ಕೂಲಿ ಕಾರ್ಮಿಕ ದಂಪತಿ ಮಲ್ಲಪ್ಪ, ಸರಸ್ವತಿಯವರ 2ನೇ ಪುತ್ರ ಮಹೇಶ್ (13) ಮೃತ ಬಾಲಕನಾಗಿದ್ದು, ಆತ ಚೋಳನಾಯಕನಹಳ್ಳಯ ಸರ್ಕಾರಿ ಶಾಲೆಯಲ್ಲಿ ಆರನೇ ತರಗತಿಯಲ್ಲಿ ಓದುತ್ತಿದ್ದನು.
ಗುಡ್ಡದಹಳ್ಳಿಯ ಗ್ಯಾಸ್ ರೀಫಿಲ್ಲಿಂಗ್ ಅಡ್ಡೆ ಬಳಿ ಮಹೇಶ್ ನಿಂತುಕೊಂಡಿದ್ದಾಗ ಸಿಲಿಂಡರ್ ಸ್ಫೋಟಗೊಂಡು ಗಂಭೀರ ಗಾಯಗೊಂಡಿದ್ದು ಆತನನ್ನು ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾನೆ.
ಆಸ್ಪತ್ರೆ ಎದುರು ಮಹೇಶ್ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಹೆಬ್ಬಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಕಳೆದ ಎಂಟು ವರ್ಷಗಳಿಂದ ಮೃತನ ಪೋಷಕರು ಕೂಲಿ ಕೆಲಸ ಮಾಡುತ್ತಿದ್ದರು. ದೇವರಾಜ್ ಎಂಬುವರಿಗೆ ಸೇರಿದ ಸಿಲಿಂಡರ್ ರೀಫಿಲ್ಲಿಂಗ್ ಮಾಡುವ ಗೋಡೌನ್’ನಲ್ಲಿ ಲಿಯಾಕತ್ ಎಂಬುವನು ಗ್ಯಾಸ್ ರೀಫಿಲ್ಲಿಂಗ್ ಮಾಡುತ್ತಿದ್ದ. ಸ್ಫೋಟದ ರಭಸಕ್ಕೆ ಪಕ್ಕದ ಮನೆಯಲ್ಲಿ ಆಟವಾಡುತ್ತಿದ್ದ ಬಾಲಕನ ದೇಹ ಛಿದ್ರವಾಗಿದೆ.
ದಾರುಣ ಘಟನೆಯ ಬೆನ್ನಲ್ಲೇ ಲಿಯಾಕತ್ ಪರಾರಿಯಾಗಿದ್ದು, ಆತನ ವಿರುದ್ಧ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.