ಚೆನ್ನೈ: ಬಂಗಾಳಕೊಲ್ಲಿಯಲ್ಲಿ ಮಿಚುವಾಂಗ್ ಎಂಬ ಮತ್ತೊಂದು ಚಂಡಮಾರುತ ಸೃಷ್ಟಿಯಾಗಿದ್ದು, ಅದರ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಪರಿಣಾಮವಾಗಿ ತಮಿಳು ನಾಡು ಸೇರಿದಂತೆ ಅನೇಕ ಕಡೆಗಳಲ್ಲಿ ಭಾರೀ ಮಳೆಯಾಗುತ್ತಿದೆ. ಅಲ್ಲದೆ ಮಿಚುವಾಂಗ್ ಚಂಡಮಾರುತ ತೀವ್ರಗೊಳ್ಳುವ ಸಾಧ್ಯತೆ ಹೆಚ್ಚಿದ್ದು, ಪುದುಚೇರಿಯ ಪೂರ್ವ-ಆಗ್ನೇಯಕ್ಕೆ ಸುಮಾರು 440 ಕಿಲೋ ಮೀಟರ್ ಮತ್ತು ಚೆನ್ನೈನ ಆಗ್ನೇಯಕ್ಕೆ 420 ಕಿಲೋ ಮೀಟರ್, ಆಂಧ್ರ ಪ್ರದೇಶದ ನೆಲ್ಲೂರಿನ ಆಗ್ನೇಯಕ್ಕೆ 740 ಕಿಲೋ ಮೀಟರ್ ದೂರದಲ್ಲಿ ಚಂಡಮಾರುತ ರೂಪಗೊಂಡಿದೆ. ಚಂಡಮಾರುತದ ಗಾಳಿಯು ಗಂಟೆಗೆ 80 ರಿಂದ 90 ಕಿಲೋ ಮೀಟರ್ ವೇಗದಲ್ಲಿ ಬೀಸುತ್ತಿದ್ದು, ಈ ವೇಗ ಗಂಟೆಗೆ 100 ಕಿಲೋ ಮೀಟರ್‌ಗೆ ಹೆಚ್ಚುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ಎಚ್ಚರಿಕೆ ನೀಡಿದೆ. ಚಂಡಮಾರುತ ಪರಿಣಾಮ ಎದುರಿಸಲು ತಮಿಳುನಾಡು ಸರ್ಕಾರ ಸಿದ್ಧವಾಗಿದ್ದು, ರಾಜ್ಯ ಮತ್ತು ಜಿಲ್ಲಾ ಮಟ್ಟದ ತುರ್ತು ಕಾರ್ಯಾಚರಣೆ ಕೇಂದ್ರಗಳನ್ನು ತೆರೆದಿದೆ.
ಈ ಹಿನ್ನೆಲೆಯಲ್ಲಿ ದಕ್ಷಿಣ ಮಧ್ಯ ರೈಲ್ವೆಯು ತಮಿಳುನಾಡಿನ ಮೂಲಕ ಹಾದುಹೋಗುವ ರೈಲುಗಳು ಸೇರಿದಂತೆ ದೇಶದ ಹಲವಾರು ಭಾಗಗಳಿಗೆ 118 ದೂರದ ರೈಲುಗಳನ್ನು ರದ್ದುಗೊಳಿಸಿದೆ.
ದಕ್ಷಿಣ ರೈಲ್ವೆ ಡಿಸೆಂಬರ್ 3 ರಿಂದ 6ರ ವರೆಗೆ 118 ರೈಲು ಸೇವೆಗಳನ್ನು ರದ್ದುಗೊಳಿಸಿದೆ. ಬೆಂಗಳೂರು-ಹೌರಾ, ತಿರುವನಂತಪುರಂ-ನವದೆಹಲಿ ಕೇರಳ ಎಕ್ಸ್‌ಪ್ರೆಸ್, ಪಾಟ್ನಾ-ಎರ್ನಾಕುಲಂ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್, ತಿರುವನಂತಪುರ ಸಿಕಂದರಾಬಾದ್ ಶಬರಿ ಎಕ್ಸ್‌ಪ್ರೆಸ್, ವಿಜಯವಾಡ ಜನಶತಾಬ್ದಿ, ಬರೌನಿ-ಕೊಯಮತ್ತೂರು ವಿಶೇಷ ರೈಲು, ಗಯಾ ಚೆನ್ನೈ ಎಕ್ಸ್‌ಪ್ರೆಸ್, ಗೋರಖ್‌ಪುರ್ ರಪ್ತಿಸಾಗರ್ ಎಕ್ಸ್‌ಪ್ರೆಸ್, ಕೊಚುವೇಲಿ, ನಿಜಾಮುದ್ದೀನ್ ಚೆನ್ನೈ ಡುರಂಟೊ ಎಕ್ಸ್‌ಪ್ರೆಸ್ ಸೇರಿ ರದ್ದಾಗಿರುವ ಪ್ರಮುಖ ರೈಲುಗಳಾಗಿವೆ.
ರದ್ದಾದ ರೈಲುಗಳು ದಕ್ಷಿಣ ರೈಲ್ವೆ, ನೈಋತ್ಯ ರೈಲ್ವೆ, ಮಧ್ಯ ರೈಲ್ವೆ, ಉತ್ತರ ರೈಲ್ವೆ ಮತ್ತು ಈಶಾನ್ಯ ರೈಲ್ವೆ ಸೇರಿದಂತೆ 12 ವಲಯ ರೈಲ್ವೆಗಳ ಮಾರ್ಗಗಳನ್ನು ಒಳಗೊಂಡಿವೆ ಎಂದು ರೈಲ್ವೆ ಇಲಾಖೆ ಪತ್ರಿಕಾ ಪ್ರಕಟಣೆ ತಿಳಿಸಿದೆ.