Home ಕ್ರೀಡೆ ಅಬುಧಾಬಿ ಪಿಚ್ ಕ್ಯುರೇಟರ್ ಮೋಹನ್ ಸಿಂಗ್ ಅನುಮಾನಾಸ್ಪದ ಸಾವು

ಅಬುಧಾಬಿ ಪಿಚ್ ಕ್ಯುರೇಟರ್ ಮೋಹನ್ ಸಿಂಗ್ ಅನುಮಾನಾಸ್ಪದ ಸಾವು

ಅಬುಧಾಬಿ: ಅಬುಧಾಬಿಯ ಶೇಖ್ ಝಾಯೆದ್ ಕ್ರೀಡಾಂಗಣದ ಪಿಚ್ ಕ್ಯುರೇಟರ್ ಆಗಿದ್ದ ಮೋಹನ್ ಸಿಂಗ್ (40), ತಮ್ಮ ಕೋಣೆಯಲ್ಲಿ ಅನುಮಾನಾಸ್ಪದವಾಗಿ ಸಾವೀಗೀಡಾಗಿದ್ದಾರೆ. ಭಾನುವಾರದ ಅಫ್ಘಾನಿಸ್ತಾನ ಹಾಗೂ ನ್ಯೂಜಿಲೆಂಡ್ ನಡುವಣ ಪಂದ್ಯಕ್ಕಾಗಿ ಪಿಚ್ ಸಿದ್ಧಪಡಿಸಿ ಶನಿವಾರ ರಾತ್ರಿ ತಮ್ಮ ಕೋಣೆಗೆ ತೆರಳಿದ್ದ ಮೋಹನ್ ಸಿಂಗ್, ಭಾನುವಾರ ಬೆಳಗ್ಗಿನ ಜಾವ ಮೃತಪಟ್ಟಿದ್ದಾರೆ.

ಮೋಹನ್ ಸಿಂಗ್ ಮೃತಪಟ್ಟಿರುವುದನ್ನು ಅಬುಧಾಬಿ ಕ್ರಿಕೆಟ್ ಸಂಸ್ಥೆಯ ಅಧಿಕಾರಿಯೊಬ್ಬರು ಧೃಡೀಕರಿಸಿದ್ದು, ಸಾವಿನ ನೈಜ ಕಾರಣ ಇನ್ನಷ್ಟೇ ತಿಳಿಯಬೇಕಿದೆ.  ಮೋಹನ್ ಸಾವಿನ ವಿಚಾರವನ್ನು ಅವರ ಕುಟುಂಬಕ್ಕೆ ತಿಳಿಸಲಾಗಿದ್ದು, ಅಬುಧಾಬಿಗೆ ಅವರನ್ನು ಕರೆತರಲು ವ್ಯವಸ್ಥೆ ಮಾಡಲಾಗಿದೆ ಎಂದಿದ್ದಾರೆ.

ಮೋಹನ್ ಸಿಂಗ್ ಸಾವಿಗೆ ದಿಗ್ಭ್ರಮೆ ವ್ಯಕ್ತಪಡಿಸಿರುವ  ಬಿಸಿಸಿಐನ ಮಾಜಿ ಮುಖ್ಯ ಕ್ಯುರೇಟರ್ ದಲ್ಜಿತ್ ಸಿಂಗ್, ಪ್ರತಿಭಾವಂತ ಹಾಗೂ ಕಠಿಣ ಪರಿಶ್ರಮಿಯಾಗಿದ್ದ ಮೋಹನ್ ಸಾವು ನಂಬಲಾಗುತ್ತಿಲ್ಲ, ಅವರ ಕುಟುಂಬಕ್ಕೆ ಸಾಂತ್ವನ ಹೇಳಲು ಬಯಸುತ್ತೇನೆ ಎಂದು ಪ್ರತಿಕ್ರಿಯಿಸಿದ್ದಾರೆ.  ದಲ್ಜಿತ್ ಸಿಗ್ ಅವರ ಜೊತೆಯಲ್ಲಿ ಮೊಹಾಲಿ ಕ್ರಿಕೆಟ್ ಮೈದಾನದಲ್ಲಿ ಮೋಹನ್ ಸಿಂಗ್  ಜೊತೆಯಾಗಿ ಕೆಲಸ ಮಾಡಿದ್ದರು. ಬಳಿಕ 20 ವರ್ಷಗಳ ಹಿಂದೆ ಯುಎಇಗೆ ತೆರಳಿದ್ದರು.

ಅಬುಧಾಬಿ ಮೈದಾನದಲ್ಲಿ ಭಾನುವಾರ ಅಫ್ಘಾನಿಸ್ತಾನ ಹಾಗೂ ನ್ಯೂಜಿಲೆಂಡ್ ನಡುವಣ ಪಂದ್ಯ ಆರಂಭವಾದ ಬಳಿಕವಷ್ಟೇ ಮೋಹನ್ ಸಾವಿನ ಸುದ್ದಿ ಹೊರ ಜಗತ್ತಿಗೆ ಗೊತ್ತಾಗಿದೆ. ಅಂತರಾಷ್ಟ್ರೀಯ ಕ್ರಿಕೆಟ್ ಸಮಿತಿ-ICC ಮೋಹನ್ ಸಾವಿನ ಬಗ್ಗೆ ಇನ್ನಷ್ಟೇ ಪ್ರತಿಕ್ರಿಯಿಸಬೇಕಿದೆ.

ಕಳೆದ 15 ವರ್ಷಗಳಿಂದ ಅಬುಧಾಬಿಯ ಶೇಖ್ ಝಾಯೆದ್ ಕ್ರೀಡಾಂಗಣದ ಪಿಚ್ ಕ್ಯುರೇಟರ್ ಆಗಿದ್ದ ಮೋಹನ್ ಸಿಂಗ್, ಐಪಿಎಲ್ ಬಳಿಕ ವಿಶ್ವಕಪ್’ ಪಂದ್ಯಗಳಿಗಾಗಿ ಪಿಚ್ ಸಿದ್ಧಪಡಿಸುವ ಕಾರ್ಯದಲ್ಲಿ ತೊಡಗಿದ್ದರು.

Join Whatsapp
Exit mobile version