►ನಾನು ರಾಜಕೀಯಕ್ಕೆ ಬರಲು ಆದಿಚುಂಚನಗಿರಿ ಮಠದ ಸ್ವಾಮೀಜಿಗಳೇ ಕಾರಣ
ಬೆಂಗಳೂರು: ನಾವು ಮಾಡಿರುವ ಸಮಾಜಸೇವೆ ಮತ್ತು ಅಭಿವೃದ್ಧಿ ಕಾರ್ಯಗಳನ್ನು ತೋರಿಸಿ, ಜನರ ಬಳಿ ಮತ ಕೇಳಲು ಹೋಗುತ್ತೇವೆ. ಆದರೆ, ಬಿಜೆಪಿಯ ನಾಯಕರು ಜಾತಿ ಧರ್ಮದ ಹೆಸರಿನಲ್ಲಿ ಮನಸುಗಳನ್ನು ಒಡೆದು, ದ್ವೇಷದ ವಿಷ ಬಿತ್ತಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಹೊರಟಿರುವುದು ರಾಜ್ಯದ ಜನರಿಗೆ ಗೊತ್ತಾಗುತ್ತಿದೆ. ಅಸಲಿಗೆ ಅಧಿಕಾರಕ್ಕಾಗಿ ತಮ್ಮ ತಮ್ಮಲ್ಲೇ ಜಿದ್ದಿಗೆ ಬಿದ್ದಿರುವ ಸಿ.ಟಿ ರವಿ ಹಾಗೂ ಆರ್.ಅಶೋಕ್ ಅವರಿಗೆ ಯಾವ ಜಾತಿ, ಧರ್ಮದವರ ಮೇಲೂ ಗೌರವ, ಪ್ರೀತಿ ಇಲ್ಲ. ಅವರಿಗೆ ಪ್ರೀತಿ ಇರುವುದು ಕೇವಲ ಅಧಿಕಾರ ಮತ್ತು ಕರ್ಚಿಯ ಮೇಲೆ ಎಂದು ಚಾಮರಾಜಪೇಟೆ ಶಾಸಕ ಹಾಗೂ ಮಾಜಿ ಸಚಿವ ಬಿ.ಝಡ್ ಝಮೀರ್ ಅಹ್ಮದ್ ಖಾನ್ ವಾಗ್ದಾಳಿ ನಡೆಸಿದ್ದಾರೆ.
ಹಾವೇರಿಯಲ್ಲಿ ಇಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ 75ನೇ ಜನ್ಮದಿನದ ಅಮೃತ ಮಹೋತ್ಸವದ ಪೂರ್ವ ಭಾವಿ ಸಭೆಯಲ್ಲಿ ಭಾಗವಹಿಸಿ, ಬಳಿಕ ಅವರು ಮಾತನಾಡಿದರು.
ನಾನು ಒಕ್ಕಲಿಗರ ಬಗ್ಗೆ ಎಲ್ಲಿಯೂ ತಪ್ಪಾಗಿ ಮಾತನಾಡಿಲ್ಲ. ಅಷ್ಟಕ್ಕೂ ನಾನು ರಾಜಕೀಯಕ್ಕೆ ಬರಲು ಚುಂಚನಗಿರಿ ಮಠದ ಸ್ವಾಮೀಜಿಗಳೇ ಕಾರಣ. ಅವರ ಆಶೀರ್ವಾದದಿಂದಲೇ ನಾನು 2005ರಲ್ಲಿ ಜೆಡಿಎಸ್ ಪಕ್ಷ ಸೇರಿದೆ. ಮಾಜಿ ಪ್ರಧಾನಿ ದೇವೇಗೌಡರೇ ನನ್ನ ರಾಜಕೀಯ ಗುರುಗಳು. ಅವರಿಂದಲೇ ನಾನು ಈ ಹಂತಕ್ಕೆ ಬೆಳೆದಿದ್ದೇನೆ. ನನ್ನ, ಒಕ್ಕಲಿಗರ ಹಾಗೂ ಚುಂಚನಗಿರಿ ಶ್ರೀಗಳ ಬಾಂಧವ್ಯವನ್ನು ವಿಜಯನಗರದ ಮಠದಲ್ಲಿ ಹೋಗಿ ಕೇಳಿ, ಗೊತ್ತಾಗುತ್ತದೆ. ನಾನೇಕೆ ಒಕ್ಕಲಿಗರ ಬಗ್ಗೆ ಮಾತನಾಡಲಿ ಎಂದು ಅವರು ಸ್ಪಷ್ಟನೆ ನೀಡಿದರು.
ಎಲ್ಲ ಜಾತಿ, ಧರ್ಮಗಳನ್ನು ಸಮಾನವಾಗಿ ಕಾಣುವ ಪಕ್ಷ ಯಾವುದಾದರೂ ಇದ್ದರೆ ಅದು ಕಾಂಗ್ರಸ್ ಪಕ್ಷ ಮಾತ್ರ. ಕೋಮು ಜ್ವರಕ್ಕೆ ಅಂಟಿಕೊಂಡಿರುವ ಸಿ.ಟಿ ರವಿ ಅವರು ಹಾಗೂ ಆರ್.ಅಶೋಕ್ ಅವರಿಗೆ ಅಧಿಕಾರದ ಆಸೆ ಇಲ್ಲವೇ? ಅವರ ಮಧ್ಯೆ ನಡೆಯುತ್ತಿರುವ ಜಟಾಪಟಿ ಬಗ್ಗೆ ನಮಗೂ ಗೊತ್ತಿದೆ. ಎಲ್ಲವನ್ನೂ ವಿವರಿಸಿ ಹೇಳಬೇಕೇ ಎಂದು ಶಾಸಕ ಝಮೀರ್ ಅಹ್ಮದ್ ಖಾನ್ ಖಾರವಾಗಿಯೇ ಪ್ರಶ್ನಿಸಿದರು.