Home ಟಾಪ್ ಸುದ್ದಿಗಳು ನರಿಗಳು ಘೀಳಿಟ್ಟರೆ ಕಾಡಿನ ರಾಜ ಬೆದರುವುದು ಉಂಟಾ?: ವಿಪಕ್ಷಗಳ ಸಭೆಗೆ ಸಿಟಿ ರವಿ ವ್ಯಂಗ್ಯ

ನರಿಗಳು ಘೀಳಿಟ್ಟರೆ ಕಾಡಿನ ರಾಜ ಬೆದರುವುದು ಉಂಟಾ?: ವಿಪಕ್ಷಗಳ ಸಭೆಗೆ ಸಿಟಿ ರವಿ ವ್ಯಂಗ್ಯ

ಚಿಕ್ಕಮಗಳೂರು: ನರಿಗಳು ಘೀಳಿಟ್ಟರೆ ಕಾಡಿನ ರಾಜ ಬೆದರುವುದು ಉಂಟಾ? ಎಂದು ಹೇಳುವ ಮೂಲಕ ವಿಪಕ್ಷ ನಾಯಕರ ಸಭೆಯನ್ನು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ವ್ಯಂಗ್ಯವಾಡಿದರು.

ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ದೇಶದಲ್ಲಿರುವ ವಿಪಕ್ಷಗಳು ಬಿಜೆಪಿ ಸೋಲಿಸಲು ಒಗ್ಗಟ್ಟಿನ ಮಂತ್ರ ಪಠಿಸಿದ್ದು, ಬೆಂಗಳೂರಿನಲ್ಲಿ ನಾಳೆಯಿಂದ ಸಭೆಯೂ ನಡೆಸಲಿದ್ದಾರೆ.

ಈ ಬಗ್ಗೆ ವ್ಯಂಗ್ಯವಾಡಿದ ಸಿಟಿ ರವಿ, ಅಲ್ಲಿ ಇಲ್ಲಿ ನರಿಗಳು ಘೀಳಿಟ್ಟರೆ ಹೃದಯ ಸಾಮ್ರಾಟ ಸಿಂಹ ಬೆದರುವುದು ಉಂಟಾ? ನಮ್ಮ ಪ್ರಧಾನಿ ನರೇಂದ್ರ ಮೋದಿ ಅನಭಿಷಿಕ್ತ ರಾಜನಿದ್ದಂತೆ. ಪ್ರಜಾಪ್ರಭುತ್ವದಲ್ಲಿ ಜನರ ಹೃದಯದಲ್ಲಿ ಸ್ಥಾನ ಪಡೆದ ಸಾಮ್ರಾಟರಾಗಿದ್ದಾರೆ. 100 ನರಿಗಳು ಕೂಗಾಡಿದರೂ ಸಿಂಹ ಅದರ ದಾರಿಯಲ್ಲೇ ನಡೆಯುತ್ತದೆ. ಕಾಡಿನ ರಾಜ ಸಿಂಹನನ್ನ ಬೆದರಿಸಲು ಆಗುತ್ತಾ? ನೂರು ವಿರೋಧ ಪಕ್ಷಗಳಿಗೆ ಭಯ ಇದೆ, ಹಾಗಾಗಿ ಒಂದಾಗುತ್ತಿವೆ. ವಿರೋಧ ಪಕ್ಷಗಳ ಒಗ್ಗಟ್ಟು ದೇಶದ ಹಿತದೃಷ್ಟಿಯಿಂದಲ್ಲ. ಅವರಿಗೆ ಹೆದರುವ ಅಗತ್ಯವಿಲ್ಲ ಎಂದರು.

ದೇಶ ವಿಶ್ವಗುರು ಆಗಬೇಕು ಎಂಬುವುದು ನಮ್ಮ ಅಜೆಂಡಾ. ಭಾರತ ವಿಶ್ವಗುರು ಆಗಬೇಕು, ಭಾರತದ ಗೌರವ ಜಾಸ್ತಿ ಆಗಬೇಕು ಎಂಬುದು ಮೋದಿ ಅವರ ಕನಸು ಎಂದು ಹೇಳಿದ ಸಿಟಿ ರವಿ, ಬೆಂಗಳೂರಿನಲ್ಲಿ ಸಭೆ ಸೇರುತ್ತಿರುವ ವಿರೋಧ ಪಕ್ಷಗಳ ಅಜೆಂಡಾ ಏನು? ನರೇಂದ್ರ ಮೋದಿಯನ್ನು ಸೋಲಿಸಬೇಕು ಎಂಬುದು ವಿಪಕ್ಷಗಳ ಕನಸು. ವಂಶ ಪಾರಂಪರ್ಯ ರಾಜಕೀಯ ಆಡಳಿತಕ್ಕೆ ಈಗ ಕುತ್ತು ಬಂದಿದೆ. ಭ್ರಷ್ಟಾಚಾರದ ಹಲವು ಪ್ರಕರಣಗಳಲ್ಲಿ ಜಾಮೀನಿನಲ್ಲಿ ಇದ್ದಾರೆ. ಹೀಗಾಗಿ ಮೋದಿ ಮತ್ತೆ ಪ್ರಧಾನಿಯಾದರೆ ನಮ್ಮ ಕುಟುಂಬದ ಕನಸು ಭಗ್ನವಾಗುತ್ತದೆ, ರಾಜಕೀಯ ಹಿತಾಸಕ್ತಿಗೆ ಧಕ್ಕೆಯಾಗುತ್ತದೆ ಎಂಬುದು ವಿಪಕ್ಷಗಳ ಅಜೆಂಡಾ ಎಂದರು.

ಲೋಕಸಭೆ ಚುನಾವಣೆಯಲ್ಲಿ ರಾಜ್ಯದ ಜನ ಬಿಜೆಪಿ ಬೆಂಬಲಿಸಲಿದ್ದಾರೆ ಎಂದು ಹೇಳಿದ ಸಿಟಿ ರವಿ, 1998ರಿಂದ ನಿರಂತರವಾಗಿ ರಾಜ್ಯದಲ್ಲಿ ಹೆಚ್ಚು ಸ್ಥಾನ ಗೆದ್ದಿದ್ದೇವೆ. ಒಂದೊಂದು ಸಂದರ್ಭಕ್ಕೆ ತಕ್ಕಂತೆ ಆಲೋಚನೆ ಮಾಡಬೇಕಾಗುತ್ತದೆ. ದೇಶದ ಹಿತದೃಷ್ಟಿಯಿಂದ ಬಿಜೆಪಿಯ ಗೆಲುವು ಅನಿವಾರ್ಯತೆ ಇದೆ ಎಂದರು.

Join Whatsapp
Exit mobile version