ಬೆಂಗಳೂರು: ಸಿ ಟಿ ರವಿ ಬಿಜೆಪಿ ರಾಜ್ಯಾಧ್ಯಕ್ಷ ಆಗಬೇಕು, ಬಸನಗೌಡ ಪಾಟೀಲ್ ಯತ್ನಾಳ್ ಪ್ರತಿಪಕ್ಷ ನಾಯಕ ಆಗಬೇಕು ಅನ್ನುವ ಕುರಿತು ನಿನ್ನೆ ಒಂದು ಹಂತದ ಸಭೆ ಆಗಿದೆ ಎಂದು ದೇವೇಗೌಡರು ಸ್ಪಷ್ಟಪಡಿಸಿದರು.
ಬೆಂಗಳೂರಿನಲ್ಲಿಂದು ಪಕ್ಷದ ಕಚೇರಿಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ, ಶಾಸಕ ಜಿ ಟಿ ದೇವೇಗೌಡ ಅವರೊಂದಿಗೆ ಜಂಟಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, 28 ಕ್ಷೇತ್ರಗಳಲ್ಲಿ ಎಲ್ಲೆಲ್ಲಿ ಗೆಲ್ಲುವ ಸಾಮರ್ಥ್ಯ ಇದೆಯೋ ಅಲ್ಲಿ ನಿಲ್ಲುತ್ತೇವೆ. ಅಧಿಕೃತ ವಿರೋಧ ಪಕ್ಷ ಬಿಜೆಪಿ, ಅನಧಿಕೃತ ವಿರೋಧ ಪಕ್ಷ ಜೆಡಿಎಸ್. ಕೆಲವೊಂದು ವಿಚಾರಕ್ಕೆ ಎರಡು ಪಕ್ಷದವರು ಸದನದಿಂದ ವಾಕ್ ಔಟ್ ಮಾಡಿದ್ದಾರೆ. ಈ ಹಿಂದೆಯೂ ಈ ರೀತಿ ಆಗಿದೆ ಎಂದರು. ನಿನ್ನೆ ಸಿದ್ದರಾಮಯ್ಯ ಪತ್ರಕರ್ತರಿಗೆ ಹೇಳಿದ ವಿಚಾರ ಪ್ರಸ್ತಾಪಿಸಿದ ಅವರು, ವರದಿಗಾರರಿಗೆ ನೈತಿಕತೆ ಇರಬೇಕು ಅಂತ ಹೇಳಿದ್ದಾರೆ. ಅವರದೇ ಪಕ್ಷದ ಜಯಚಂದ್ರ ಅವರು ವರದಿ ನೀಡಿದ್ದಾರೆ. ಆದ್ರೆ ಅದರ ವಿರುದ್ಧ ಇನ್ನೂ ಕ್ರಮ ತೆಗೆದುಕೊಂಡಿಲ್ಲ. ಅವರು ನೀತಿ ಹೇಳಿದ್ದಾರೆ. ನೈತಿಕತೆ ಪಾಠ ಮಾಡೋ ಇವರಿಗೆ ನೈತಿಕತೆ ಇಲ್ಲವಾ ಎಂದು ಹೆಸರೇಳದೆ ಸಿದ್ದರಾಮಯ್ಯಗೆ ಚಾಟಿ ಬೀಸಿದರು.