Home ಟಾಪ್ ಸುದ್ದಿಗಳು ರಾಷ್ಟ್ರಪತಿ ಚುನಾವಣೆಯಲ್ಲೂ ಭರ್ಜರಿ ಅಡ್ಡ ಮತದಾನ!: ವಿರೋಧಿ ಬಣಕ್ಕೆ ಮತ ಹಾಕಿದವರು ಯಾರೆಲ್ಲಾ?

ರಾಷ್ಟ್ರಪತಿ ಚುನಾವಣೆಯಲ್ಲೂ ಭರ್ಜರಿ ಅಡ್ಡ ಮತದಾನ!: ವಿರೋಧಿ ಬಣಕ್ಕೆ ಮತ ಹಾಕಿದವರು ಯಾರೆಲ್ಲಾ?

ನವದೆಹಲಿ : ದೇಶದ 15ನೇ ರಾಷ್ಟ್ರಪತಿಗಾಗಿ ಸೋಮವಾರ ಮತದಾನ ನಡೆದಿದ್ದು, ಯುಪಿ, ಗುಜರಾತ್, ಒಡಿಶಾ, ಅಸ್ಸಾಂ ಸೇರಿದಂತೆ ಹಲವು ರಾಜ್ಯಗಳಲ್ಲಿ ರಾಷ್ಟ್ರಪತಿ ಚುನಾವಣೆಯಲ್ಲಿ ಅಡ್ಡ ಮತದಾನ ಭರ್ಜರಿಯಾಗಿ ನಡೆದಿದೆ ಎಂದು ತಿಳಿದುಬಂದಿದೆ.

ಆದಿತ್ಯನಾಥ್ ಕುರಿತಾಗಿ ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಯಾಗಿದ್ದ ಉತ್ತರ ಪ್ರದೇಶದ ಬರೇಲಿಯ ಎಸ್ಪಿ ಶಾಸಕ ಶಹಜೀಲ್ ಇಸ್ಲಾಂ ಅವರು ದ್ರೌಪದಿ ಮುರ್ಮು ಅವರಿಗೆ ಮತ ಹಾಕಿದ್ದಾರೆ ಎಂದು ತಿಳಿದು ಬಂದಿದೆ. ವಿವಾದಾತ್ಮಕ ಹೇಳಿಕೆಯ ಬಳಿಕ ಶಹಜೀಲ್ ಅವರಿಗೆ ಸೇರಿದ ಪೆಟ್ರೋಲ್ ಬಂಕ್ ಮೇಲೆ ಬುಲ್ಡೋಜರ್ ಕ್ರಮ ಕೈಗೊಳ್ಳಲಾಗಿದೆ.

ಅಸ್ಸಾನಲ್ಲಿ ಕಾಂಗ್ರೆಸ್ ಶಾಸಕರು ದೊಡ್ಡ ಪ್ರಮಾಣದಲ್ಲಿ ಅಡ್ಡ ಮತದಾನ ಮಾಡಿದ್ದಾರೆ ಎಂದು ಎಐಯುಡಿಎಫ್ ಶಾಸಕ ಕರಿಮುದ್ದೀನ್ ಬರ್ಬುಯಾ ಹೇಳಿದ್ದಾರೆ. 20ಕ್ಕೂ ಹೆಚ್ಚು ಕಾಂಗ್ರೆಸ್ ಶಾಸಕರು ಅಡ್ಡ ಮತದಾನ ಮಾಡಿ ಎನ್ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅಬವರನ್ನು ಬೆಂಬಲಿಸಿದ್ದು,  ಫಲಿತಾಂಶದಲ್ಲಿ ನೀವು ಸಂಖ್ಯೆ ತಿಳಿಯಬಹುದು ಎಂದು ಅವರು ಹೇಳಿದ್ದಾರೆ.

ಗುಜರಾತ್ನಲ್ಲಿ ಶರದ್ ಪವಾರ್ ಅವರ ಪಕ್ಷದ ಎನ್ಸಿಪಿ ಶಾಸಕ ಕಂಧಲ್ ಜಡೇಜಾ ಅವರು ಎನ್ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರಿಗೆ ಮತ ಹಾಕಿದ್ದಾಗಿ ಮಾಹಿತಿ ನೀಡಿದ್ದಾರೆ.

ಮುಲಾಯಂ ಸಿಂಗ್ ಯಾದವ್  ಅವರನ್ನು ಐಎಸ್ಐ ಏಜೆಂಟ್ ಎಂದು ಪ್ರತಿಪಕ್ಷದ ಅಭ್ಯರ್ಥಿ ಯಶವಂತ್ ಸಿನ್ಹಾ ಬಣ್ಣಿಸಿದ್ದ ಕಾರಣಕ್ಕಾಗಿ ನಾವು ಅವರಿಗೆ ಮತ ಹಾಕುವುದಿಲ್ಲ  ಎಂದು  ಸಮಾಜವಾದಿ ಪಕ್ಷದ ನಾಯಕ  ಮತ್ತು ಅಖಿಲೇಶ್ ಯಾದವ್ ಅವರ ಚಿಕ್ಕಪ್ಪ ಶಿವಪಾಲ್ ಯಾದವ್ ಹೇಳಿದ್ದರು. ಆದರೆ, ಮತ ಚಲಾಯಿಸುವ ಮುನ್ನ ಮಾಜಿ ಸಿಎಂ ಹಾಗೂ ಎಸ್ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಯಶವಂತ್ ಸಿನ್ಹಾ ಅವರಿಗೆ ಮತ ಹಾಕುವುದಾಗಿ ಹೇಳಿದ್ದಾರೆ.

ಒಡಿಶಾದ ಕಾಂಗ್ರೆಸ್ ಶಾಸಕ ಮೊಹಮದ್ ಮುಕಿಮ್, ತಾವು ಎನ್ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರಿಗೆ ಮತ ಹಾಕಿರುವುದಾಗಿ ತಿಳಿಸಿದ್ದಾರೆ.  ಇದು ನನ್ನ ವೈಯಕ್ತಿಕ ನಿರ್ಧಾರ ಎಂದ ಅವರು, ನನ್ನ ಮನದಾಳದ ಮಾತಿಗೆ ಕಿವಿಗೊಟ್ಟಿದ್ದೇನೆ, ಅದಕ್ಕಾಗಿಯೇ ನಾನು ದ್ರೌಪದಿ ಮುರ್ಮುಗೆ ಮತ ಹಾಕಿದ್ದೇನೆ. ಆದರೆ, ಒಡಿಶಾದಲ್ಲಿ ಕಾಂಗ್ರೆಸ್ ರಾಜ್ಯಾಧ್ಯಕ್ಷರನ್ನಾಗಿ ಮಾಡದ ಕಾರಣ ಮುಕಿಮ್ ಕೋಪಗೊಂಡಿದ್ದು, ಪಕ್ಷದ ವಿರುದ್ಧವಾಗಿ ಮತ ಚಲಾಯಿಸಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.

Join Whatsapp
Exit mobile version