ಬಿಹಾರದ ಇಬ್ಬರು ಮಕ್ಕಳ ಬ್ಯಾಂಕ್ ಖಾತೆಗೆ ದಿಢೀರ್ ಕೋಟ್ಯಂತರ ರೂ. ನಗದು ವರ್ಗಾವಣೆ

Prasthutha|

ಪಾಟ್ನಾ: ಬಿಹಾರದಲ್ಲಿ ಇಬ್ಬರು ಮಕ್ಕಳ ಬ್ಯಾಂಕ್ ಖಾತೆಗೆ ದಿಢೀರ್ ಆಗಿ ಕೋಟ್ಯಂತರ ರೂಪಾಯಿಗಳು ವರ್ಗಾವಣೆಯಾಗಿದ್ದು, ಕುಟುಂಬದ ಸದಸ್ಯರು ಅಚ್ಚರಿಗೊಂಡಿದ್ದಾರೆ.

ಬಿಹಾರದ ಕಟಿಹಾರ್ ಜಿಲ್ಲೆಯಲ್ಲಿನ 6 ನೇ ತರಗತಿಯ ವಿದ್ಯಾರ್ಥಿಗಳಾದ ಅಶಿಶ್ ಕುಮಾರ್ ಮತ್ತು ಗುರುಚರಣ್ ಖಾತೆಗೆ ಸೆಪ್ಟೆಂಬರ್ 15 ರಂದು ಕ್ರಮವಾಗಿ 6,20,11,100, 90,52,21,223 ಜಮಾವಣೆಯಾಗಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಬಿಹಾರ ಮೂಲಕ ಬಾಗ್ಪುರ ಪಂಚಾಯತ್ ನ ಪಾಸ್ಟಿಯಾ ಗ್ರಾಮದ ನಿವಾಸಿಗಳಾದ ಈ ಮಕ್ಕಳು ಉತ್ತರ ಬಿಹಾರ ಗ್ರಾಮೀಣ ಬ್ಯಾಂಕ್ ನಲ್ಲಿ ಖಾತೆಗಳನ್ನು ಹೊಂದಿದ್ದಾರೆ. ಮಕ್ಕಳು ಈ ಮೊತ್ತವನ್ನು ಪಡೆದಿರುವ ಕುರಿತು ಕಟಿಹಾರ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಉದಯನ್ ಮಿಶ್ರಾ ದೃಢಪಡಿಸಿದ್ದಾರೆ.

- Advertisement -

ಬ್ಯಾಂಕ್ ಖಾತೆಗೆ ಹಣ ಜಮಾವಣೆ ಆದ ತಕ್ಷಣ ಆ ಖಾತೆಗಳನ್ನು ಸ್ಥಗಿತಗೊಳಿಸಿ, ಹಣ ಪಡೆಯುವುದನ್ನು ನಿಲ್ಲಿಸಿದ್ದೇವೆ. ಈ ಕುರಿತು ಮಕ್ಕಳ ಪೋಷಕರಲ್ಲಿ ವಿಚಾರಿಸಿದಾಗ ಹಣದ ಮೂಲದ ಬಗ್ಗೆ ನಮಗೆ ಮಾಹಿತಿಯಿಲ್ಲ ಎಂದು ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ತನಿಖೆ ಮುಂದುವರಿದಿದೆ ಎಂದು ಗ್ರಾಮೀಣ ಬ್ಯಾಂಕ್ ನ ಎಲ್.ಡಿ.ಎಂ ಆದ ಎಂ.ಕೆ ಮಧುಕರ್ ತಿಳಿಸಿದ್ದಾರೆ.

ಈ ಹಿಂದೆ ಬಿಹಾರದ ಖಗರಿಯಾ ಜಿಲ್ಲೆಯ ರಂಜಿತ್ ದಾಸ್ ಎಂಬವರ ಬಿಹಾರ್ ಗ್ರಾಮೀಣ ಬ್ಯಾಂಕ್ ಖಾತೆಗೆ 5.5 ಲಕ್ಷ ರೂಪಾಯಿ ಜಮಾವಣೆಯಾಗಿತ್ತು. ಪ್ರಧಾನಿ ನರೇಂದ್ರ ಮೋದಿ ನೀಡಿದ್ದ ಭರವಸೆಯಂತೆ, ಪ್ರತಿಯೊಬ್ಬ ನಾಗರಿಕನ ಬ್ಯಾಂಕ್ ಖಾತೆಗೆ 15 ಲಕ್ಷ ರುಪಾಯಿಯಲ್ಲಿ ಮೊದಲ ಕಂತನ್ನು ವರ್ಗಾವಣೆ ಮಾಡಿದ್ದಾರೆ ಹೇಳಿ ಹಣವನ್ನು ಹಿಂದಿರುಗಿಸಲು ನಿರಾಕರಿಸಿ ಜೈಲು ಸೇರಿದ್ದನ್ನು ಇಲ್ಲಿ ಸ್ಮರಿಸಬಹುದು.

- Advertisement -