Home ಟಾಪ್ ಸುದ್ದಿಗಳು ಬಾಗಲಕೋಟೆ: ಇಳಕಲ್ ವಕ್ಫ್ ಸಂಸ್ಥೆಯಲ್ಲಿ ಕೋಟ್ಯಂತರ ರೂ. ಅವ್ಯವಹಾರ!

ಬಾಗಲಕೋಟೆ: ಇಳಕಲ್ ವಕ್ಫ್ ಸಂಸ್ಥೆಯಲ್ಲಿ ಕೋಟ್ಯಂತರ ರೂ. ಅವ್ಯವಹಾರ!

ಬಾಗಲಕೋಟೆ: ಇಲ್ಲಿನ ಇಳಕಲ್ ನಗರದಲ್ಲಿರುವ ಹಝ್ರತ್ ಸೈಯದ್ ಮುರ್ತುಜಾ ಖಾದ್ರಿ, (ದ, ಅ) ಮತ್ತು ಅಂಜುಮನ್ ಎ ಇಸ್ಲಾಂ ಎಂಬ ವಕ್ಫ್ ಸಂಸ್ಥೆಯಲ್ಲಿ ಕೋಟ್ಯಾಂತರ ರೂಪಾಯಿ ಅವ್ಯವಹಾರ ನಡೆದಿರುವ ಬಗ್ಗೆ ವರದಿಯಾಗಿದೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಕರ್ನಾಟಕ ಮುಸ್ಲಿಂ ಪೊಲಿಟಿಕಲ್ ಫೋರಂ ರಾಜ್ಯ ಕಾರ್ಯದರ್ಶಿ ಸಿರಾಜ್ ಜಾಫ್ರಿ, ಈ ಸಂಸ್ಥೆಯಲ್ಲಿ 10 ಕೋಟಿ ರೂಪಾಯಿಗೂ ಅಧಿಕ ಅವ್ಯವಹಾರ ನಡೆದಿದೆ ಆರೋಪಿಸಿದ್ದಾರೆ.

ಕಳೆದ 20 ವರ್ಷಗಳಿಂದ ಉಸ್ಮಾನ್ ಗಣಿ ಹುಮ್ನಾಬಾದ್ ಮತ್ತು ವ್ಯವಸ್ಥಾಪಕ ಸಮಿತಿಯ ಸದಸ್ಯರು ಜೊತೆಗೂಡಿ ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಉದ್ದೇಶಪೂರ್ವಕವಾಗಿ ವಕ್ಫ್ ನಿಯಮಗಳನ್ನು ಗಾಳಿಗೆ ತೂರಿ ಸಮಾಜಕ್ಕೆ ದ್ರೋಹ ಬಗೆದು, ಹಣ ಲೂಟಿ ಮಾಡುವ ಮೂಲಕ ಸರ್ಕಾರದ ಬೊಕ್ಕಸಕ್ಕೆ‌ ಅಪಾರ ನಷ್ಟವನ್ನುಂಟು ಮಾಡಿದ್ದಾರೆ. ತಮ್ಮ ಸ್ವಾರ್ಥ ಮತ್ತು ರಾಜಕೀಯ ಉದ್ದೇಶಗಳಿಗಾಗಿ ಈ ನೀತಿ ನಿಯಮಗಳನ್ನು ಗಾಳಿಗೆ ತೋರಿ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ ಎಂದು ಅವರು ದೂರಿದರು.

15 ಲಕ್ಷ ರೂಪಾಯಿಗಳನ್ನು ಪರ್ಫೆಕ್ಟ್ ಕೋ ಆಪರೇಟಿವ್ ಸೊಸೈಟಿಯಲ್ಲಿ ವಕ್ಫ್ ಸಂಸ್ಥೆಯಾದ ದರ್ಗಾ ಹೆಸರಿನಲ್ಲಿ ಫಿಕ್ಸ್ ಡಿಪೋಸಿಟ್ ಮಾಡಿ ತಮ್ಮ ಮತ್ತು ತಮ್ಮ ಧರ್ಮಪತ್ನಿಯ ಹೆಸರಿನಲ್ಲಿ ಇದ್ದ ಸಾಲವನ್ನು ತೀರಿಸಲು ಈ ಹಣವನ್ನು ಅಕ್ರಮವಾಗಿ ಉಪಯೋಗಿಸಿದ್ದಾರೆ. ದರ್ಗಾ ಹೆಸರಿನಲ್ಲಿ ಹಲವು ಖಾತೆಗಳನ್ನು ಬೇರೆ ಬೇರೆ ಬ್ಯಾಂಕ್ ಮತ್ತು ಸೊಸೈಟಿಯಲ್ಲಿ ಸ್ಥಾಪಿಸಿ ಕೇವಲ ಒಂದು ಬ್ಯಾಂಕಿನ ಮಾಹಿತಿ ಇಲಾಖೆಗೆ ನೀಡಿ ವಂಚನೆ ಮಾಡಿರುತ್ತಾರೆ. ಸಂಸ್ಥೆಗೆ ಸೇರಿರುವ ವಾಣಿಜ್ಯ ಸಂಕೀರ್ಣ ಮತ್ತು ಬಾಡಿಗೆ ಸಂಗ್ರಹಣೆಯ ಬಗ್ಗೆ ಇಲಾಖೆಗೆ ಸುಳ್ಳು ಮಾಹಿತಿ ನೀಡಿ ಸರ್ಕಾರ ಬೊಕ್ಕಸಕ್ಕೆ ನಷ್ಟ ಉಂಟುಮಾಡಿ ಹಣ ಲೂಟಿ ಮಾಡುವ ಕೆಲಸವನ್ನು ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ಮುಂದಿನ 15 ದಿನಗಳಲ್ಲಿ ಸಂಬಂಧಿಸಿದ ಇಲಾಖೆಯವರು ಕ್ರಮ ಕೈಗೊಳ್ಳದೆ ಹೋದಲ್ಲಿ ಜಾರಿ ನಿರ್ದೇಶನಾಲಯದಲ್ಲಿ ಸಂಬಂಧಿಸಿದವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದರು.

Join Whatsapp
Exit mobile version