ಕಂದಾಯ ಇಲಾಖೆಯ ದಾಖಲೆಗಳನ್ನು ತಿದ್ದಿದ ಅಧಿಕಾರಿಗಳ ಮೇಲೆ ಕ್ರಿಮಿನಲ್ ಕೇಸ್: ಗೋವಿಂದ ಕಾರಜೋಳ

Prasthutha|

 ಬೆಂಗಳೂರು: ಕಂದಾಯ ಇಲಾಖೆಯ ಕಾಗದ ಪತ್ರಗಳಲ್ಲಿ ಹೆಸರನ್ನು ಬದಲಾವಣೆ ಮಾಡಿದರೆ ಅವರು ಅಪರಾಧಿಗಳಾಗುತ್ತಾರೆ. ಮಾಡಿ ಕೊಟ್ಟವರು ಅಪರಾಧಿಗಳಾಗುತ್ತಾರೆ. ಇಬ್ಬರ ಮೇಲೆಯೂ ಕ್ರಮ ತೆಗೆದುಕೊಳ್ಳುತ್ತೇವೆ. ಅಧಿಕಾರಿಗಳನ್ನು ಅಮಾನತು ಮಾಡಿ, ಅವರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸುತ್ತೇವೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ.

 ವಿಧಾನಸಭೆಯಲ್ಲಿ ಶೂನ್ಯ ವೇಳೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು, ಯಾದಗಿರಿ ಜಿಲ್ಲೆಯ ಕೊಡೆಕಲ್ ಗ್ರಾಮದಲ್ಲಿ ಸರ್ವೇ ನಂಬರ್ 72ರಲ್ಲಿ 15 ಎಕರೆ 10 ಗುಂಟೆ ಜಮೀನನ್ನು ಕೃಷ್ಣ ಭಾಗ್ಯ ಜಲ ನಿಗಮ ಯೋಜನೆಗೆ ತೆಗದೆದುಕೊಂಡು ಪರಿಹಾರವನ್ನು ಕೂಡ ಕೊಟ್ಟಿದ್ದಾರೆ. ಅಲ್ಲಿನ ತಹಶೀಲ್ದಾರ್ ಹಾಗೂ ಅವರ ಸಿಬ್ಬಂದಿ ಸೇರಿ ಭ್ರಷ್ಟಾಚಾರ ಉದ್ದೇಶದಿಂದ ಖಾಸಗಿ ವ್ಯಕ್ತಿಗಳಾದ ಬಸಮ್ಮ ಕೋಂ ಚನ್ನಮಲ್ಲಪ್ಪ ಅದ್ನೂರಾ ಎಂಬ ಹೆಸರಿನಲ್ಲಿ ಪಹಣಿ ಬದಲಾಯಿಸಿ, ಹೆಸರು ಬದಲಾವಣೆ ಮಾಡಿದ್ದಾರೆ. ಕೃಷ್ಣ ಭಾಗ್ಯ ಜಲ ನಿಗಮ ಪರಿಹಾರ ತೆಗೆದುಕೊಂಡು ತಹಶೀಲ್ದಾರ್ ಬಸಮ್ಮನವರ ಜೊತೆ ಸೇರಿ ಪಹಣಿ ಬದಲಾಯಿಸಿದ್ದಾರೆ. ಆ ರೀತಿ ಬದಲಾಯಿಸಲು ತಹಶೀಲ್ದಾರ್ ಗೆ ಯಾವುದೇ ಅಧಿಕಾರ ಇಲ್ಲ. ಸರಿಯಾದ ದಾಖಲೆ ಇದ್ದರೆ, ಉಪ ಆಯುಕ್ತರು ಬದಲಾವಣೆ ಮಾಡಬೇಕು. ಈ ಕಾರಣಕ್ಕೆ ಕಂದಾಯ ಅಧಿಕಾರಿಗಳು ಹಾಗೂ ಗ್ರಾಮ ಲೆಕ್ಕಾಧಿಕಾರಿಯನ್ನು ಸಸ್ಪೆಂಡ್ ಮಾಡಿದ್ದಾರೆ. ಆದರೆ, ತಹಶೀಲ್ದಾರನನ್ನು ಸಸ್ಪೆಂಡ್ ಮಾಡಿಲ್ಲ. ತಕ್ಷಣ ತಹಶೀಲ್ದಾರನನ್ನು ಸಸ್ಪೆಂಡ್ ಮಾಡಿ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದರು.

- Advertisement -

 ಇದಕ್ಕೆ ಪ್ರತಿಕ್ರಿಯಿಸಿದ ಗೋವಿಂದ ಕಾರಜೋಳ ಅವರು, ಈ ವಿಚಾರ ನನ್ನ ಗಮನಕ್ಕೆ ಬಂದೇ ಇರಲಿಲ್ಲ. ಈಗ ಬಂದಿದೆ. ಭೂಸ್ವಾಧೀನವನ್ನು ಕಂದಾಯ ಇಲಾಖೆ ಅಧಿಕಾರಿಗಳು ಮಾಡಬೇಕು. ಹಾಗೇನಾದರೂ ಆಗಿದ್ದರೆ ಕಂದಾಯ ಇಲಾಖೆಗೆ ಸಂಬಂಧಿಸಿದ ತಹಶೀಲ್ದಾರ್ ರೇ ಆಗಿರಬಹುದು. ಕೆಳಗಿನ ನೌಕರರೇ ಆಗಿರಬಹುದು. ಖಂಡಿತವಾಗಿಯೂ ಕ್ರಮ ತೆಗೆದುಕೊಳ್ಳುತ್ತೇವೆ. ಅವರನ್ನು ಸಸ್ಪೆಂಡ್ ಮಾಡಲು ಸರ್ಕಾರದಿಂದ ಸೂಚನೆ ಕೊಡುತ್ತೇವೆ. ಹಣವನ್ನು ರಿಕವರಿ ಮಾಡಲು ಡಿಸಿಗೆ ಹೇಳುತ್ತೇನೆ. ಕ್ರಿಮಿನಲ್ ಕೇಸ್ ಹಾಕೋಣ, ತಕ್ಷಣ ಯಾದಗಿರಿ ಜಿಲ್ಲಾಧಿಕಾರಿಗೆ ಸೂಚನೆ ಕೊಡುತ್ತೇನೆ ಎಂದು ತಿಳಿಸಿದರು.

- Advertisement -