Home ಟಾಪ್ ಸುದ್ದಿಗಳು ಮಹಿಳೆಯರ ಮೇಲಿನ ಅಪರಾಧ ಪ್ರಕರಣ; ಬೆಂಗಳೂರಿಗೆ 3ನೇ ಸ್ಥಾನ

ಮಹಿಳೆಯರ ಮೇಲಿನ ಅಪರಾಧ ಪ್ರಕರಣ; ಬೆಂಗಳೂರಿಗೆ 3ನೇ ಸ್ಥಾನ

ಬೆಂಗಳೂರು:  ಮಹಿಳೆಯರ ಮೇಲಿನ  ಅಪರಾಧ ಪ್ರಕರಣಗಳಲ್ಲಿ ದೇಶದ ಮೆಟ್ರೋ ನಗರಗಳ ಪೈಕಿ ರಾಜ್ಯ ರಾಜಧಾನಿ  ಬೆಂಗಳೂರು 3ನೇ ಸ್ಥಾನದಲ್ಲಿದೆ ಎಂದು ತಿಳಿದು ಬಂದಿದೆ.

ಸತತ ಮೂರನೇ ವರ್ಷ ಎಲ್ಲಾ ಮೆಟ್ರೋಪಾಲಿಟನ್ ನಗರಗಳಲ್ಲಿ ಮಹಿಳೆಯರ ಮೇಲಿನ ಅಪರಾಧಗಳ ಪಟ್ಟಿಯಲ್ಲಿ ದೆಹಲಿ ಮತ್ತು ಮುಂಬೈ ನಗರಗಳು ಕ್ರಮವಾಗಿ ಮೊದಲ ಎರಡು ಸ್ಥಾನದಲ್ಲಿವೆ. ಈ ಮೂಲಕ ದೇಶದ ರಾಜಧಾನಿ ನವದೆಹಲಿ, ಮೆಟ್ರೋ ನಗರಗಳ ಪೈಕಿ ಮಹಿಳೆಯರಿಗೆ ಅತ್ಯಂತ ಅಪಾಯಕಾರಿ ನಗರವಾಗಿ ಹೊರಹೊಮ್ಮಿದೆ.

ಕಳೆದ ಜುಲೈ ತಿಂಗಳಲ್ಲಿ ಹೊಸದಿಲ್ಲಿ ರೈಲು ನಿಲ್ದಾಣದ ವಿದ್ಯುತ್ ನಿರ್ವಹಣಾ ಕೊಠಡಿಯೊಳಗೆ ನಾಲ್ವರು ರೈಲ್ವೆ ಉದ್ಯೋಗಿಗಳು 30 ವರ್ಷದ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಆರೋಪದ ಮೇಲೆ ನಗರವು ಭಾರೀ ಜನಾಕ್ರೋಶಕ್ಕೆ ಒಳಗಾಗಿತ್ತು.

2021ನೇ ಸಾಲಿನ ರಾಷ್ಟ್ರೀಯ ಅಪರಾಧ ಬ್ಯೂರೋ  ವರದಿ ಪ್ರಕಾರ ಕಳೆದ ವರ್ಷ ದೇಶದ 19 ಮೆಟ್ರೋ ನಗರಗಳಲ್ಲಿ ಮಹಿಳೆಯರ ಮೇಲಿನ ಅಪರಾಧದ 43414 ಪ್ರಕರಣ ದಾಖಲಾಗಿವೆ. ಈ ಪೈಕಿ ದೆಹಲಿಯಲ್ಲಿ 13892, ಮುಂಬೈ 5543 ಮತ್ತು ಬೆಂಗಳೂರು 3127 ಪ್ರಕರಣಗಳು ನಡೆದಿವೆ.

ಕಳೆದ ವರ್ಷದಲ್ಲಿ ಪ್ರತಿ ದಿನ ಸರಾಸರಿ ಮೂರು ಅತ್ಯಾಚಾರಗಳು ವರದಿಯಾಗುತ್ತಿವೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್ ಆರ್ ಸಿಬಿ) ತಿಳಿಸಿದೆ. 2020ಕ್ಕೆ ಹೋಲಿಸಿದರೆ ದೆಹಲಿಯಲ್ಲಿ ಇಂಥ ಪ್ರಕರಣಗಳಲ್ಲಿ ಶೇ.40ರಷ್ಟುಭಾರೀ ಏರಿಕೆಯಾಗಿದೆ. ಜೊತೆಗೆ ದೆಹಲಿಯಲ್ಲಿ ಪ್ರತಿ ದಿನ ಇಬ್ಬರು ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ನಡೆಯುತ್ತಿದ್ದು,  ಮಹಿಳೆಯರ ಅಪಹರಣ, ಪತಿಯರ ಕ್ರೌರ್ಯ, ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರದಲ್ಲೂ ದೆಹಲಿ ಮೊದಲನೇ  ಸ್ಥಾನದಲ್ಲಿದೆ.

2019-2021 ರ ಎನ್ ಸಿ ಆರ್ ಬಿ ದತ್ತಾಂಶದ ಪ್ರಕಾರ, 2021 ರಲ್ಲಿ ಉತ್ತರ ಪ್ರದೇಶದಲ್ಲಿ ಮಹಿಳೆಯರ ವಿರುದ್ಧ ಅತಿ ಹೆಚ್ಚು ಅಪರಾಧಗಳು ದಾಖಲಾಗಿದ್ದು, ಕಳೆದ ವರ್ಷ 56,083 ರಷ್ಟಿತ್ತು. ಮಹಿಳೆಯರ ವಿರುದ್ಧ 40,738 ಅಪರಾಧಗಳೊಂದಿಗೆ ರಾಜಸ್ಥಾನವು ಯುಪಿಯ ನಂತರದ ಸ್ಥಾನದಲ್ಲಿದೆ.  2021 ರಲ್ಲಿ 39,526 ಇಂತಹ ಅಪರಾಧಗಳೊಂದಿಗೆ ಮಹಾರಾಷ್ಟ್ರ ನಂತರದ ಸ್ಥಾನದಲ್ಲಿದೆ. ಪಶ್ಚಿಮ ಬಂಗಾಳ (35,884) ಮತ್ತು ಒಡಿಶಾ (31,352) ಕ್ರಮವಾಗಿ ನಾಲ್ಕು ಮತ್ತು ಐದನೇ ಅತಿ ಹೆಚ್ಚು ಮಹಿಳೆಯರ ವಿರುದ್ಧದ ಅಪರಾಧಗಳನ್ನು ದಾಖಲಿಸಿವೆ.

Join Whatsapp
Exit mobile version