ಕ್ರಿಕೆಟ್ ನಲ್ಲಿ ಪುರುಷರಿಗೆ ನೀಡುವ ವೇತನವನ್ನೇ ಮಹಿಳಾ ಆಟಗಾರರಿಗೂ ನೀಡಲು ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿ ಮಹತ್ವದ ನಿರ್ಧಾರ ಕೈಗೊಂಡಿದೆ. ನ್ಯೂಜಿಲೆಂಡ್ ಕ್ರಿಕೆಟ್ ಮತ್ತು ಆಟಗಾರರನ್ನು ಪ್ರತಿನಿಧಿಸುವ ಸಂಸ್ಥೆಯ ನಡುವೆ ಇದಕ್ಕೆ ಸಂಬಂಧಿಸಿದಂತೆ ಐದು ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಆಗಸ್ಟ್ 1ರಿಂದ ಹೊಸ ಒಪ್ಪಂದ ಜಾರಿಗೆ ಬರಲಿದೆ.
ʻನ್ಯೂಜಿಲೆಂಡ್ ಕ್ರಿಕೆಟ್ ನಲ್ಲಿ ನಡೆದಿರುವ ಅತ್ಯಂತ ಪ್ರಮುಖ ಒಡಂಬಡಿಕೆ ಇದಾಗಿದ್ದು, ದೇಶದಲ್ಲಿ ಮಹಿಳಾ ಕ್ರಿಕೆಟ್ ನ ಬೆಳವಣಿಗೆಗೆ ಇದು ನೆರವಾಗಲಿದೆ’ ಎಂದು ನ್ಯೂಜಿಲೆಂಡ್ ಕ್ರಿಕೆಟ್ ಮುಖ್ಯಸ್ಥ ಡೇವಿಡ್ ವೈಟ್ ಹೇಳಿದ್ದಾರೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತು ದೇಶೀಯ ಕ್ರಿಕೆಟ್ ನಲ್ಲಿ ಆಡುವ ಮಹಿಳಾ ಕ್ರಿಕೆಟಿಗರು ಪ್ರತಿ ಪಂದ್ಯಕ್ಕೆ ಪುರುಷರು ಪಡೆಯುವಷ್ಟೇ ವೇತನ ಪಡೆಯಲಿದ್ದಾರೆ. ಟೆಸ್ಟ್, ಏಕದಿನ ಮತ್ತು ಟಿ20 ಸೇರಿದಂತೆ ಮೂರೂ ಮಾದರಿಗೂ ಈ ಒಪ್ಪಂದ ಅನ್ವಯವಾಗಲಿದೆ. ಇದರೊಂದಿಗೆ ದೇಶೀಯ ಕ್ರಿಕೆಟ್ ಒಪ್ಪಂದಕ್ಕೆ ಒಳಪಡುವ ಆಟಗಾರ್ತಿಯರ ಸಂಖ್ಯೆ 54ರಿಂದ 72ಕ್ಕೆ ಏರಲಿದೆ.
ಹೊಸ ಒಪ್ಪಂದದ ಪ್ರಕಾರ ನ್ಯೂಜಿಲೆಂಡ್ ನ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸುವ ಅಗ್ರ ಶ್ರೇಯಾಂಕದ ಆಟಗಾರ್ತಿ, ಪ್ರತಿವರ್ಷ ಗರಿಷ್ಠ 83, 432 ಡಾಲರ್ ವರೆಗೂ ವೇತನ ಪಡೆಯಲಿದ್ದಾರೆ. ಇದೇ ವೇಳೆ ದೇಶೀಯ ಕ್ರಿಕೆಟ್ ನಲ್ಲಿ ಈ ಮೊತ್ತ 3, 423 ಡಾಲರ್ ಆಗಿರಲಿದೆ.
“ಇದೊಂದು ಮಹತ್ವದ ಹೆಜ್ಜೆಯಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ವನಿತೆಯರನ್ನು ಕ್ರಿಕೆಟ್ ನತ್ತ ಆಕರ್ಷಿಸಲು ಈ ಒಪ್ಪಂದ ನೆರವಾಗಲಿದೆ. ಅಂತಾರಾಷ್ಟ್ರೀಯ ಮತ್ತು ದೇಶೀಯ ಮಹಿಳಾ ಆಟಗಾರರು ಪುರುಷರೊಂದಿಗೆ ಒಂದೇ ಒಪ್ಪಂದದಲ್ಲಿ ಗುರುತಿಸಿಕೊಳ್ಳುವುದು ಅದ್ಭುತವಾದ ತೀರ್ಮಾನವಾಗಿದೆ” ಎಂದು ನ್ಯೂಜಿಲೆಂಡ್ ಮಹಿಳಾ ತಂಡದ ನಾಯಕಿ ಸೋಫಿ ಡಿವೈನ್ ಹೇಳಿದ್ದಾರೆ.