ಮೈಸೂರು: ಮೈಸೂರು ಅಭಿವೃದ್ಧಿ ಚರ್ಚೆಗೆ ಕಾಂಗ್ರೆಸ್ ಮತ್ತು ಬಿಜೆಪಿ ಮುಂದಾಗಿದ್ದು, ಮೈಸೂರು ಅಭಿವೃದ್ಧಿ ವಿಚಾರದಲ್ಲಿ ಇಂದು ಕೈ-ಕಮಲ ಮುಖಾಮುಖಿ ಆಗುವ ಸಾಧ್ಯತೆಯಿದೆ.
ಬಿಜೆಪಿ ಏನು ಅಭಿವೃದ್ಧಿ ಮಾಡಿದೆ ಎಂಬ ಮಾಜಿ ಸಿಎಂ ಸಿದ್ದರಾಮಯ್ಯರವರ ಪ್ರಶ್ನೆಯ ಹಿನ್ನೆಲೆಯಲ್ಲಿ ಸಂಸದ ಪ್ರತಾಪ್ ಸಿಂಹ ಅವರು ಸಿದ್ದರಾಮಯ್ಯ ಹಾಗೂ ಮಾಜಿ ಸಚಿವ ಎಚ್.ಸಿ ಮಹದೇವಪ್ಪಗೆ ಚರ್ಚೆಗೆ ಆಹ್ವಾನ ಮಾಡಿದ್ದರು. ಆದರೆ ಸಿದ್ದರಾಮಯ್ಯ, ಮಹದೆವಪ್ಪ ಪರವಾಗಿ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ಚರ್ಚೆಗಿಳಿಯಲಿದ್ದಾರೆ ಎಂದು ತಿಳಿದು ಬಂದಿದೆ.
ಇಂದು ಬೆಳಗ್ಗೆ 11 ಗಂಟೆಗೆ ಕಾಂಗ್ರೆಸ್ ಕಚೇರಿಯಿಂದ ಸಂಸದ ಪ್ರತಾಪ್ ಸಿಂಹ ಕಚೇರಿವರೆಗೂ ಲಕ್ಣ್ಮಣ್ ಪಾದಯಾತ್ರೆ ಮಾಡಲಿದ್ದಾರೆ. ಚರ್ಚೆಗೆ ತೆರಳಲಿರುವ ಎಂ. ಲಕ್ಣ್ಮಣ, ಕುರ್ಚಿ ಮತ್ತು ಟೇಬಲ್ ತೆಗೆದುಕೊಂಡು ಹೋಗಲಿದ್ದಾರೆ. ಬಿಜೆಪಿ ಯುವ ಮೋರ್ಚಾದಿಂದಲೂ ಚರ್ಚೆಗೆ ಸಿದ್ದತೆ ನಡೆದಿದ್ದು, ಬೆಳಗ್ಗೆ 9.30ಕ್ಕೆ ಮೆಟ್ರೊಪೋಲ್ ಸರ್ಕಲ್ನಿಂದ ಪಾದಯಾತ್ರೆ ಮೂಲಕ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಕಚೇರಿ ತಲುಪಲಿದ್ದಾರೆ. ಸಿದ್ದರಾಮಯ್ಯ ಅಥವಾ ಮಹದೇವಪ್ಪ ಜೊತೆ ಮಾತ್ರ ಚರ್ಚೆ ಅಂತಾ ಸಂಸದ ಪ್ರತಾಪ್ ಸಿಂಹ ಸ್ಪಷ್ಟಪಡಿಸಿದ್ದು ತೀವ್ರ ಕುತೂಹಲ ಉಂಟುಮಾಡಿದೆ.
ಜೂನ್ 29ರ ಬೆಳಿಗ್ಗೆ 11 ಗಂಟೆಗೆ ಸಂಸದರ ಕಚೇರಿಯಲ್ಲಿ ಚರ್ಚೆ ನಡಯಲಿದ್ದು, ಜಲದರ್ಶಿನಿಯ ಕಚೇರಿ ಬಳಿ ದಾಖಲೆ ಸಮೇತ ಹಾಜರಾಗುತ್ತೇನೆ. ಕಾಂಗ್ರೆಸ್ ಪಕ್ಷದ ರಾಜ್ಯ ವಕ್ತಾರನಾಗಿ ಪ್ರತಾಪ್ ಸಿಂಹ ಎದುರು ಚರ್ಚೆಗೆ ಬರುತ್ತಿದ್ದೇನೆ. ಎರಡನೇ ಬಾರಿಗೆ ಆಹ್ವಾನ ನೀಡುತ್ತಿದ್ದು, ಈ ಬಾರಿ ಪಲಾಯನ ಮಾಡಬೇಡಿ. ಜನರಿಗೆ ಸತ್ಯ ಹೇಳಲು ಯಾರಾದರೇನು? ಚರ್ಚೆಗೆ ಬನ್ನಿ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಮಣ್ ಈ ಹಿಂದೆ ಸವಾಲು ಹಾಕಿದ್ದರು.ಅದರ ಭಾಗವಾಗಿ ಲಕ್ಷ್ಮಣ್ ತೆರಳುತ್ತಿದ್ದು ಕೈ ಕಮಲ ಕ್ರೆಡಿಟ್ ಪಾಲಿಟಿಕ್ಸ್ ಕ್ಲೈಮಾಕ್ಸ್ ಇಂದು ನಡೆಯುತ್ತದೆಯೇ ಎಂದು ಕಾದು ನೋಡಬೇಕು.