ಗುವಾಹಟಿ: ತ್ರಿಪುರಾದ ಕೆಲವು ಜಿಲ್ಲೆಗಳಲ್ಲಿ ಮತ್ತು ರಾಜಧಾನಿ ಅಗರ್ತಲಾದಲ್ಲಿ ನಡೆದ ಹಿಂಸಾಚಾರದ ನಂತರ ಸಿಪಿಎಂ ಪಕ್ಷದ ಪ್ರಧಾನ ಕಚೇರಿ ಸೇರಿದಂತೆ ಎರಡು ಕಚೇರಿಗಳಿಗೆ ಅಪರಿಚಿತ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ.
ಸಿಪಿಎಂ ರಾಜ್ಯ ಪ್ರಧಾನ ಕಚೇರಿ ಭಾನು ಸ್ಮೃತಿ ಭವನ ಮತ್ತು ದಶರಥ ಭವನಕ್ಕೆ ಬೆಂಕಿ ಹಚ್ಚಲಾಗಿದೆ. ಮಾತ್ರವಲ್ಲದೆ ಪಾರ್ಕ್ ಮಾಡಲಾಗಿದ್ದ ಹಲವಾರು ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ.
ಇತ್ತೀಚೆಗೆ ತ್ರಿಪುರಾದ ಕೆಲವು ಜಿಲ್ಲೆ, ರಾಜಧಾನಿ ಅಗರ್ತಲಾದಲ್ಲಿ ಸಿಪಿಎಂ ಮತ್ತು ಬಿಜೆಪಿ ನಡುವೆ ಏರ್ಪಟ್ಟಿರುವ ಘರ್ಷಣೆಯನ್ನು ವಿರೋಧಿಸಿ ಬಿಜೆಪಿ ಬೃಹತ್ ಪ್ರತಿಭಟನಾ ಜಾಥಾವನ್ನು ಹಮ್ಮಿಕೊಂಡ ಹಿನ್ನೆಲೆಯಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು.
ಈ ನಡುವೆ ತನ್ನ ಕಚೇರಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿರುವ ಕುಕೃತ್ಯವನ್ನು ಖಂಡಿಸಿರುವ ಸಿಪಿಎಂ, ಬಿಜೆಪಿ ಕುಮ್ಮಕ್ಕಿನಿಂದ ಈ ಕುಕೃತ್ಯ ನಡೆದಿದೆ ಎಂದು ಆರೋಪಿಸಿದೆ. ಈ ಆರೋಪವನ್ನು ತಳ್ಳಿಹಾಕಿರುವ ಬಿಜೆಪಿ ಪಕ್ಷ ಸಿಪಿಎಂ ಕಡೆಯಿಂದ ನಮ್ಮ ಮೇಲೆ ಬಾಂಬ್ ಎಸೆಯಲಾಗಿದೆ ಎಂದು ಹೇಳಿದೆ.