ಜಾಹೀರಾತು ನೀಡಿಕೆಯಲ್ಲಿ ಸರಕಾರದ ಜಾತಿ ತಾರತಮ್ಯ: ಸಿಪಿಐ(ಎಂ) ಖಂಡನೆ

Prasthutha|

ಬೆಂಗಳೂರು: ಬ್ರಾಹ್ಮಣರ ಮಾಲೀಕತ್ವದಲ್ಲಿರುವ ಮಾಧ್ಯಮಗಳಿಗೆ ಪ್ರತಿ ತಿಂಗಳು ಎರಡು ಜಾಹೀರಾತು ನೀಡುವಂತೆ ಸುತ್ತೋಲೆ ಹೊರಡಿಸಿರುವ ರಾಜ್ಯ ಸರಕಾರದ ನಡೆಯನ್ನು ಖಂಡಿಸಿದ ಸಿಪಿಐ(ಎಂ), ಜಾಹೀರಾತು ನೀಡಿಕೆಯಲ್ಲಿ ಸರಕಾರ ಜಾತಿ ತಾರತಮ್ಯವನ್ನು ಅನುಸರಿಸಿದೆ ಎಂದು ಹೇಳಿದೆ.

ಈ ಕುರಿತು ಪತ್ರಿಕಾ ಪ್ರಕಟನೆ ಬಿಡುಗಡೆ ಮಾಡಿರುವ ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಯು.ಬಸವರಾಜ, ಕರ್ನಾಟಕ ಸರಕಾರ ತನ್ನ ಸಾಧನೆಗಳನ್ನು ಪ್ರಚುರಪಡಿಸಲು ಮಾಧ್ಯಮಗಳಿಗೆ ನೀಡುವ ಜಾಹೀರಾತುಗಳಲ್ಲಿಯೂ ಬ್ರಾಹ್ಮಣರ ಮಾಲೀಕತ್ವದಲ್ಲಿರುವ ಮಾಧ್ಯಮಗಳಿಗೆ ಪ್ರತಿ ತಿಂಗಳು ಎರಡು ಜಾಹೀರಾತು ನೀಡುವಂತೆ ಆದೇಶಿಸುವ ಮೂಲಕ ಜಾತಿ ತಾರತಮ್ಯ ಮೆರೆಯುವ ಮೂಲಕ ಜಾತಿವಾದಿ ನೀತಿಯನ್ನು ಅನುಸರಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -

ಇದೊಂದು ಸಂವಿಧಾನ ಹಾಗೂ ಪ್ರಜಾಪ್ರಭುತ್ವ ವಿರೋಧಿಯಾದ ದುಷ್ಕೃತ್ಯವಾಗಿದ್ದು, ಕೂಡಲೇ ಅಂತಹ ತಾರತಮ್ಯ ನೀತಿಯನ್ನು ಮತ್ತು ಸುತ್ತೋಲೆಯನ್ನು ವಾಪಾಸು ಪಡೆಯುವಂತೆ ಅವರು ಒತ್ತಾಯಿಸಿದ್ದಾರೆ.

ಇದು, ಅದಾಗಲೇ ಜಾತಿ ತಾರತಮ್ಯವನ್ನು ಬಲಗೊಳಿಸುವ ನೀತಿಯನ್ನು ಜಾರಿಗೊಳಿಸಲು, ಕರ್ನಾಟಕ ರಾಜ್ಯ ಧಾರ್ಮಿಕ ಸ್ವಾತಂತ್ಯ ಸಂರಕ್ಷಣೆಯ ಸುಗ್ರಿವಾಜ್ಞೆಯನ್ನು ಹೊರಡಿಸಿರುವುದರ ಮುಂದುವರಿದ ಭಾಗವಾಗಿದೆ.
ಈ ರಾಜ್ಯ ಸರಕಾರ ಕೇವಲ ಜಾತಿ ತಾರತಮ್ಯ ಎಸಗುತ್ತಿರುವುದು ಮಾತ್ರವಲ್ಲ, ಧಾರ್ಮಿಕ ತಾರತಮ್ಯವನ್ನು ಮುಂದುವರಿಸಿದೆ ಎಂದು ಬಸವರಾಜ ಹೇಳಿದ್ದಾರೆ.

ಧಾರ್ಮಿಕ ದ್ವೇಷಕ್ಕೆ ಬಲಿಯಾದ ಹಿಂದುತ್ವವಾದಿ ಯುವಜನರಿಗೆ ನೀಡುತ್ತಿರುವ 25 ಲಕ್ಷ ರೂ.ಗಳ ಪರಿಹಾರವನ್ನು ಅದೇ ರೀತಿ ಧಾರ್ಮಿಕ ದ್ವೇಷಕ್ಕೆ ತುತ್ತಾದ ಮುಸ್ಲಿಂ ಯುವಕರ ಕುಟುಂಬಗಳಿಗೆ ಪರಿಹಾರ ನೀಡಲು ನಿರಾಕರಿಸುತ್ತಿದೆ. ಮಾತ್ರವಲ್ಲಾ, ಹಿಂದುತ್ವವಾದಿ ಕೊಲೆಗಡುಕರ ಮೇಲೆ ಕಠಿಣ ಕ್ರಮವಹಿಸದೇ ಮೀನ ಮೇಷ ಮಾಡುತ್ತಾ ನಿರಾಕರಿಸುತ್ತಿರುವುದು ಹಿಂದುತ್ವ ಮತಾಂಧರಿಗೆ ನೀಡುವ ಕುಮ್ಮಕ್ಕಾಗಿದೆ. ಇಂತಹ ಎಲ್ಲ ಜಾತಿವಾದಿ ಹಾಗೂ ಕೋಮುವಾದಿ ತಾರತಮ್ಯವನ್ನು ಈ ಕೂಡಲೇ ನಿಲ್ಲಿಸುವಂತೆ ಅವರು ಆಗ್ರಹಿಸಿದ್ದಾರೆ.

- Advertisement -