Home ಟಾಪ್ ಸುದ್ದಿಗಳು ವೈಫಲ್ಯ ಮರೆಮಾಚಲು ತನ್ನದೇ ಪಕ್ಷದ ಕಚೇರಿಗೆ ಬಾಂಬ್ ದಾಳಿ ನಡೆಸಿದ ಸಿಪಿಐ(ಎಂ) – ಮೈತ್ರಿ ಪಕ್ಷ...

ವೈಫಲ್ಯ ಮರೆಮಾಚಲು ತನ್ನದೇ ಪಕ್ಷದ ಕಚೇರಿಗೆ ಬಾಂಬ್ ದಾಳಿ ನಡೆಸಿದ ಸಿಪಿಐ(ಎಂ) – ಮೈತ್ರಿ ಪಕ್ಷ ಸಿಪಿಐಯಿಂದ ಗಂಭೀರ ಆರೋಪ

►42 ಬೆಂಗಾವಲು ವಾಹನದೊಂದಿಗೆ ಸಂಚರಿಸುವುದು ಎಡಪಕ್ಷಕ್ಕೆ ಭೂಷಣವಲ್ಲ – ಪಿನರಾಯಿ ವಿಜಯನ್ ವಿರುದ್ಧ ಹರಿಹಾಯ್ದ ಸಿಪಿಐ

ತಿರುವನಂತಪುರಂ: ಜೂನ್ 30ರಂದು ತಿರುವನಂತಪುರಂ ಎಕೆಜಿ ಸೆಂಟರ್ (ಸಿಪಿಐ(ಎಂ)ನ ಕೇಂದ್ರ ಕಚೇರಿ) ಮೇಲೆ ನಡೆದ ಬಾಂಬ್ ದಾಳಿಯು ಪೊಲೀಸರ ನೆರವಿನ ಮೂಲಕ ಸಿಪಿಐ(ಎಂ) ಪಕ್ಷವೇ ನಡೆಸಿದ ಪೂರ್ವ ನಿರ್ಧರಿತ ಕೃತ್ಯ ಎಂದು ಸಿಪಿ(ಐ)ಎಂನ ಮೈತ್ರಿ ಪಕ್ಷ ಸಿಪಿಐ ಆರೋಪಿಸಿದೆ.

ಜುಲೈ 23ರಂದು ತಿರುವನಂತಪುರಂನ ನೆಡುಮಙಾಡ್‌ನಲ್ಲಿ ನಡೆದ‌ ಸಿಪಿಐಯ ಜಿಲ್ಲಾ ಸಮಾವೇಶದಲ್ಲಿ ತಮ್ಮದೇ ಮೈತ್ರಿ ಪಕ್ಷದ ವಿರುದ್ಧ ಸಿಪಿಐ ಈ ಗಂಭೀರ ಆರೋಪವನ್ನು ಮಾಡಿದೆ.

ಸಮಾವೇಶದಲ್ಲಿ ಸಿಪಿಐ(ಎಂ) ಮತ್ತು ಮುಖ್ಯಮಂತ್ರಿ ಪಿನರಾಯಿ ವಿಜಯನ್ ವಿಚಾರವಾಗಿ ಗಂಭೀರ ಚರ್ಚೆಗಳು ನಡೆದಿದೆ. ಇತ್ತೀಚೆಗೆ ಸರಕಾರ ವರ್ಚಸ್ಸು ಕಳೆದುಕೊಳ್ಳುತ್ತಿದ್ದು, ವಿವಾದಗಳು, ಸಿಪಿಐ(ಎಂ) ವಿರುದ್ಧದ ಆರೋಪಗಳಿಂದ ಜನರ ಗಮನ ಬೇರೆಡೆ ಸೆಳೆಯಲು ಪಕ್ಷವೇ ಪೊಲೀಸರ ಜೊತೆಗೂಡಿ ಮಾಡಿರುವ ಕೃತ್ಯವಾಗಿದೆ ಈ ಬಾಂಬ್ ದಾಳಿ ಎಂದು ಸಿಪಿಐ ಚರ್ಚೆ ನಡೆಸಿದೆ.

ಘಟನೆ ನಡೆದು ತಿಂಗಳಾಗುತ್ತಾ ಬಂದರೂ ಇನ್ನೂ ಯಾಕೆ ಆರೋಪಿಗಳ ಬಂಧನವಾಗಿಲ್ಲ. ಘಟನೆಯ ಕುರಿತಾದ ಸಿಸಿಟಿವಿ ದೃಶ್ಯಾವಳಿಗಳಿದ್ದರೂ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಾಕೆ ವಿಫಲರಾಗಿದ್ದಾರೆ ಎಂಬ ಪ್ರಶ್ನೆಗಳೂ ಸಮಾವೇಶದಲ್ಲಿ ಕೇಳಿಬಂತು.

ಅಲ್ಲದೇ ಮುಖ್ಯಮಂತ್ರಿ ಪಿನರಾಯಿ ವಿಜಯನ್ ವಿರುದ್ಧವೂ ಸಮಾವೇಶದಲ್ಲಿ ಚರ್ಚೆಯಾಗಿದ್ದು, 42 ಬೆಂಗಾವಲು ವಾಹನಗಳೊಂದಿಗೆ ಸಂಚರಿಸುವ ಮುಖ್ಯಮಂತ್ರಿ ಎಡಪಕ್ಷದ ಮುಖವಾಗಿರಲು ಸಾಧ್ಯವೇ ಇಲ್ಲ ಎಂದಿದೆ.

ಜೂನ್ 30ರಂದು ತಡರಾತ್ರಿ ದ್ವಿಚಕ್ರ ವಾಹನದಲ್ಲಿ ಬಂದ ವ್ಯಕ್ತಿಯೋರ್ವ ಸಿಪಿಐ(ಎಂ) ಕಚೇರಿ ಎಕೆಜಿ ಸೆಂಟರ್‌ಗೆ ಸ್ಫೋಟಕ ವಸ್ತುವನ್ನು ಎಸೆದು ಪರಾರಿಯಾಗಿದ್ದ. ಇದು ರಾಹುಲ್ ಗಾಂಧಿ ರಾಜ್ಯ ಭೇಟಿ ಹಿನ್ನೆಲೆಯಲ್ಲಿ ಗಲಭೆ ಉಂಟು ಮಾಡಲು ಸಿಪಿಐ (ಎಂ) ನಡೆಸಿದ ಕೃತ್ಯ ಎಂದು ಅಂದೇ ಪ್ರತಿಪಕ್ಷ ಯುಡಿಎಫ್ ಆರೋಪಿಸಿತ್ತು‌. ಘಟನೆ ನಡೆದು ಒಂದು ತಿಂಗಳಾಗುತ್ತಾ ಬಂದರೂ ತನಿಖೆ ಚುರುಕು ಕಾಣದಿರುವುದು ಸಾರ್ವಜನಿಕ ವಲಯದಲ್ಲಿ ಹಲವು ಅನುಮಾನಗಳಿಗೆ ಕಾರಣವಾಗಿದೆ.

Join Whatsapp
Exit mobile version