Home ಟಾಪ್ ಸುದ್ದಿಗಳು 3 ಪಕ್ಷ ಬದಲಿಸಿರುವ ಸಿಪಿ ಯೋಗೇಶ್ವರ್ ರಾಜಕೀಯ ಹಾದಿ: ವಿವಿಧ ಚಿಹ್ನೆಗಳಿಂದ ಸ್ಪರ್ಧಿಸಿ ಗೆಲುವು..!

3 ಪಕ್ಷ ಬದಲಿಸಿರುವ ಸಿಪಿ ಯೋಗೇಶ್ವರ್ ರಾಜಕೀಯ ಹಾದಿ: ವಿವಿಧ ಚಿಹ್ನೆಗಳಿಂದ ಸ್ಪರ್ಧಿಸಿ ಗೆಲುವು..!

ಮಾಜಿ ಎಂಎಲ್ ಸಿ, ಬಿಜೆಪಿ ನಾಯಕ ಸಿಪಿ ಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆಯಾಗಿದ್ದು, ಕಾಂಗ್ರೆಸ್ ಟಿಕೆಟ್ ಇವರಿಗೆ ನೀಡುವುದು ಬಹುತೇಕ ಖಚಿತವಾಗಿದೆ.


ಇನ್ನು ಸಿಪಿ ಯೋಗೇಶ್ವರ್ ಅವರ ರಾಜಕೀಯ ಹಾದಿ ವರ್ಣ ರಂಜಿತದಿಂದ ಕೂಡಿದೆ. ಸಿಪಿ ಯೋಗೇಶ್ವರ್ ಏಳು ಚುನಾವಣೆಗಳನ್ನು ಎದುರಿಸಿದ್ದು, ನಾಲ್ಕು ಬಾರಿ ಗೆಲವು ಸಾಧಿಸಿದ್ದಾರೆ. ಗೆದ್ದ ನಾಲ್ಕೂ ಬಾರಿಯೂ ಬೇರೆ ಬೇರೆ ಚಿಹ್ನೆಗಳಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ.


ಸೈನಿಕ ಚಿತ್ರದಲ್ಲಿ ನಾಯಕನಾಗಿ ನಟಿಸಿ ಖ್ಯಾತಿ ಗಳಿಸಿರುವ ಸಿಪಿ ಯೋಗೇಶ್ವರ್ ಅವರು 1999ರಲ್ಲಿ ಚುನಾವಣಾ ರಾಜಕಾರಣಕ್ಕೆ ದುಮುಕಿದರು. 1999ರಲ್ಲಿ ಪಕ್ಷೇತರವಾಗಿ ಸ್ಪರ್ಧಿಸಿ ಕಾಂಗ್ರೆಸ್ ನ ಕಾಂತ ಸಾದತ್ ಅಲಿ ಖಾನ್ ಅವರನ್ನು 2282 ಮತಗಳ ಅಂತರದಿಂದ ಸೋಲಿಸಿದರು.


ನಂತರ ಸಿಪಿ ಯೋಗೇಶ್ವರ್ ಅವರು ಕಾಂಗ್ರೆಸ್ ಸೇರ್ಪಡೆಯಾದರು. 2004ರಲ್ಲಿ ನಡೆದ ಚುನಾವಣೆಯಲ್ಲಿ ಜೆಡಿಎಸ್ ನ ಅಶ್ವಥ್ ಎಮ್ಸಿ ಅವರನ್ನು ಸೋಲಿಸಿ 16,169 ಮತಗಳ ಅಂತರದಿಂದ ಗೆದ್ದು ಬೀಗಿದ್ದರು. ಮತ್ತೆ 2008ರಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಿದರು. ಆಗಲೂ ಜೆಡಿಎಸ್ ಅಭ್ಯರ್ಥಿಯನ್ನು 4,930 ಮತಗಳ ಅಂತರದಿಂದ ಪರಾಭವಗೊಳಿಸಿ ವಿಜಯಪತಾಕೆ ಹಾರಿಸಿದರು.


ನಂತರ 2009ರಲ್ಲಿ ಪ್ರಥಮ ಬಾರಿಗೆ ಬಿಜೆಪಿಯಿಂದ ಸ್ಪರ್ಧಿಸಿದರು. ಈ ಚುನಾವಣೆಯಲ್ಲಿ ಜೆಡಿಎಸ್ ನ ಅಶ್ವತ್ಥ್ ಎಮ್ಸಿ ಅವರ ವಿರುದ್ಧ 2282 ಮತಗಳ ಅಂತರದಿಂದ ಸೋಲು ಕಂಡರು. ಬಳಿಕ, 2011 ರಲ್ಲಿ ಮತ್ತೆ ಬಿಜೆಪಿಯಿಂದ ಸ್ಪರ್ಧಿಸಿದರು. ಈ ಚುನಾವಣೆಯಲ್ಲಿ ಸಿಪಿ ಯೋಗೇಶ್ವರ್ ಜೆಡಿಎಸ್ ಅಭ್ಯರ್ಥಿ ನಾಗರಾಜು ಅವರನ್ನು 17,803 ಮತಗಳ ಅಂತರದಿಂದ ಸೋಲಿಸಿ, ಅಭೂತಪೂರ್ವ ಜಯಗಳಿಸಿದರು.


2013ರಲ್ಲಿ ಸಮಾಜವಾದಿ ಪಾರ್ಟಿಯಿಂದ ಸ್ಪರ್ಧಿಸಿ, ಜೆಡಿಎಸ್ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಅವರನ್ನು 6,464 ಮತಗಳಿಂದ ಸೋಲು ಉಣಿಸಿದರು. 2018ರಲ್ಲಿ ಹೆಚ್ಡಿ ಕುಮಾರಸ್ವಾಮಿ ಅವರ ವಿರುದ್ಧ 21 ಸಾವಿರ ಮತಗಳ ಅಂತರದಿಂದ ಸೋಲು ಕಂಡರು. ಮತ್ತೆ 2023ರ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹೆಚ್ಡಿ ಕುಮಾರಸ್ವಾಮಿ ಅವರ ವಿರುದ್ಧ 15 ಸಾವಿರಕ್ಕೂ ಅಧಿಕ ಮತಗಳಿಂದ ಸೋಲುಂಡರು.

Join Whatsapp
Exit mobile version