ಬೆಂಗಳೂರು: ಕೊಡವರಿಗೆ ಬಂದೂಕು ಲೈಸೆನ್ಸ್ ನಿಂದ ವಿನಾಯಿತಿ ನೀಡಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಇದರಿಂದ ಕೊಡವರು ಲೈಸನ್ಸ್ ರಹಿತವಾಗಿ ಬಂದೂಕು ಇರಿಸಿಕೊಳ್ಳಬಹುದಾಗಿದೆ.
ನಿವೃತ್ತ ಕ್ಯಾ. ವೈ.ಕೆ. ಚೇತನ್ ಎಂಬವರು ಲೈಸನ್ಸ್ ವಿನಾಯಿತಿ ಪ್ರಶ್ನಿಸಿ ಪಿಐಎಲ್ ಸಲ್ಲಿಸಿದ್ದರು. ಅದನ್ನು ಹೈಕೋರ್ಟ್ ವಿಭಾಗೀಯ ಪೀಠ ವಜಾ ಗೊಳಿಸಿದ್ದು, ಕೊಡವರಿಗೆ ನೀಡಿರುವ ವಿನಾಯಿತಿ ನ್ಯಾಯಬದ್ಧವಾಗಿದೆ ಎಂದು ಆದೇಶ ನೀಡಿದೆ.
ಕೊಡವರಿಗೆ ಸ್ವಾತಂತ್ರ್ಯ ಪೂರ್ವದಿಂದಲೇ ಈ ರೀತಿ ರಿಯಾಯಿತಿ ಇದೆ. ಕೊಡವರು, ಜಮ್ಮಾ ಭೂಮಿ ಹೊಂದಿದವರಿಗೆ ಈ ರಿಯಾಯಿತಿ ಕಲ್ಪಿಸಲಾಗಿದೆ. ಶಸ್ತ್ರಾಸ್ತ್ರ ಕಾಯ್ದೆಯಲ್ಲೇ ಬಂದೂಕು ಪರವಾನಗಿ ವಿನಾಯಿತಿ ನೀಡಲಾಗಿದೆ. ಕೇಂದ್ರ ಸರ್ಕಾರದ ಅಧಿಸೂಚನೆಯಲ್ಲಿ ಮಧ್ಯ ಪ್ರವೇಶದ ಅಗತ್ಯವಿಲ್ಲ ಎಂದು ಹೈಕೋರ್ಟ್ ವಿಭಾಗೀಯ ಪೀಠ ಅಭಿಪ್ರಾಯಪಟ್ಟಿದೆ.
ಪಿಐಎಲ್ ವಜಾ ಮಾಡುವಂತೆ ಹಿರಿಯ ವಕೀಲ ಎ.ಎಸ್.ಪೊನ್ನಣ್ಣ, ಸಜನ್ ಪೂವಯ್ಯ, ಧ್ಯಾನ್ ಚಿನ್ನಪ್ಪ ಮತ್ತು ಎಂ.ಟಿ. ನಾಣಯ್ಯ ವಾದ ಮಂಡನೆ ಮಾಡಿದ್ದರು.
ಹೈಕೋಟ್೯ ತೀರ್ಪಿನ ಬಗ್ಗೆ ಹೈಕೋಟ್೯ ವಕೀಲ ಎ.ಎಸ್.ಪೊನ್ನಣ್ಣ ಹಷ೯ ವ್ಯಕ್ತಪಡಿಸಿದ್ದಾರೆ.
ಕೊಡವರು ಮತ್ತು ಜಮ್ಮಾ ಹಿಡುವಳಿದಾರರಿಗೆ ಕೋವಿ ಹಕ್ಕು ಅಭಾದಿತ ಎಂದು ಹೈಕೋರ್ಟ್ ಹೇಳಿರುವುದು ಸ್ವಾಗತಾರ್ಹ. ವಾದ ಮಂಡಿಸಿದ ವಕೀಲರ ತಂಡಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಇದೊಂದು ಮಹತ್ವದ ಆದೇಶ ಎಂದು ಪೊನ್ನಣ್ಣ ಸಂತಸ ವ್ಯಕ್ತಪಡಿಸಿದ್ದಾರೆ.