ಲಖನೌ : ಮಾಂಸ ಸಾಗಾಟ ಮತ್ತು ಮಾರಾಟ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದ ವ್ಯಕ್ತಿಯೊಬ್ಬರ ಮೇಲೆ ಸ್ವಯಂ ಘೋಷಿತ ಗೋರಕ್ಷಕ ತಂಡವೊಂದು ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಉತ್ತರ ಪ್ರದೇಶದಲ್ಲಿ ವರದಿಯಾಗಿದೆ. ಉತ್ತರ ಪ್ರದೇಶದ ಮೊರದಾಬಾದ್ ಜಿಲ್ಲೆಯ ಕಟ್ಘರ್ ಠಾಣಾ ವ್ಯಾಪ್ತಿಯಲ್ಲಿ ಮೊಹಮ್ಮದ್ ಶಕೀರ್ ಎಂಬಾತನ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ. ಇಷ್ಟೂ ಸಾಲದೆಂಬಂತೆ, ಶಕೀರ್ ಮೇಲೆಯೇ ಸ್ಥಳೀಯ ಪೊಲೀಸರು ದೂರು ದಾಖಲಿಸಿಕೊಂಡಿರುವುದೂ ವರದಿಯಾಗಿದೆ.
ಶಕೀರ್ ನ ಸಹೋದರ ನೀಡಿರುವ ದೂರಿನ ಆಧಾರದಲ್ಲಿ ಪೊಲೀಸರು ದೂರು ದಾಖಳಿಸಿಕೊಂಡಿದ್ದಾರೆ. ಆದರೆ ಸಂತ್ರಸ್ತ ಶಕೀರ್ ವಿರುದ್ಧ ಪೊಲೀಸರು ಸ್ವಯಂ ಪ್ರೇರಣೆಯಿಂದ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರಾಣಿಯೊಂದನ್ನು ಹತ್ಯೆಗೈದು ಸೋಂಕು ವ್ಯಾಪಿಸುವ ಸಾಧ್ಯತೆಯ ಕೃತ್ಯವೆಸಗಿದ ಹಾಗೂ ಲಾಕ್ ಡೌನ್ ನಿಯಮಗಳನ್ನು ಉಲ್ಲಂಘಿಸಿದ ಆರೋಪವನ್ನು ಸಂತ್ರಸ್ತನ ವಿರುದ್ಧ ಹೊರಿಸಲಾಗಿದೆ.
ಶಕೀರ್ ಸದ್ಯ ಮನೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾನೆ. ಹಲ್ಲೆ ನಡೆಸಿದ ಗುಂಪಿನ ನೇತೃತ್ವ ವಹಿಸಿದ್ದ ಮನೋಜ್ ಠಾಕೂರ್ ನನ್ನು ಪೊಲೀಸರ ಇನ್ನೂ ಬಂಧಿಸಿಲ್ಲ. ಆತನೊಂದಿಗಿದ್ದ ನಾಲ್ವರನ್ನು ಬಂಧಿಸಲಾಗಿದೆ. ಇಬ್ಬರು ತಲೆ ಮರೆಸಿಕೊಂಡಿದ್ದಾರೆ.
ಶಕೀರ್ ತನ್ನ ಸ್ಕೂಟರ್ ನಲ್ಲಿ ೫೦ ಕೆಜಿ ಎಮ್ಮೆ ಮಾಂಸ ಸಾಗಿಸುತ್ತಿದ್ದಾಗ ಅಡ್ಡಗಟ್ಟಿ ಹಲ್ಲೆ ನಡೆಸಲಾಗಿದೆ. ಆರೋಪಿಗಳು ಆತನಿಂದ ೫೦,೦೦೦ ಹಣ ವಸೂಲಿಗೆ ಬೇಡಿಕೆಯಿಟ್ಟಿದ್ದರು ಎನ್ನಲಾಗಿದೆ. ಅಲ್ಲದೆ, ಪೊಲೀಸ್ ದೂರು ನೀಡದಂತೆ ಎಚ್ಚರಿಕೆಯನ್ನೂ ನೀಡಿದ್ದರು ಎಂದು ವರದಿಗಳು ತಿಳಿಸಿವೆ.
ಶಕೀರ್ ಬಳಿ ಮಾಂಸ ಖರೀದಿಗೆ ಸಂಬಂಧೀಸಿ ರಶೀದಿಯಿತ್ತು. ಆದರೂ ಆತನಿಗೆ ಹಲ್ಲೆ ನಡೆಸಲಾಗಿದೆ. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಮಾಜವಾದಿ ಪಕ್ಷದ ಸಂಸದ ಎಸ್.ಟಿ. ಹಸನ್ ಒತ್ತಾಯಿಸಿದ್ದಾರೆ.