Home ಟಾಪ್ ಸುದ್ದಿಗಳು ಹೊಸ ಕಾನೂನಿನ ಪ್ರಕಾರ ಎಲ್ಲಾ ನಿಯಮ ಪಾಲಿಸಿದ್ದರೂ, ಜಾನುವಾರು ಸಾಗಾಟಗಾರನ ಮೇಲೆ ಮಾರಣಾಂತಿಕ ಹಲ್ಲೆ

ಹೊಸ ಕಾನೂನಿನ ಪ್ರಕಾರ ಎಲ್ಲಾ ನಿಯಮ ಪಾಲಿಸಿದ್ದರೂ, ಜಾನುವಾರು ಸಾಗಾಟಗಾರನ ಮೇಲೆ ಮಾರಣಾಂತಿಕ ಹಲ್ಲೆ

ಬೆಂಗಳೂರು : ಪ್ರತಿಪಕ್ಷಗಳ ಆಕ್ಷೇಪದ ನಡುವೆಯೂ ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದ ತಿದ್ದುಪಡಿ ಮಾಡಲಾದ ಗೋಹತ್ಯೆ ನಿಷೇಧ ಕಾಯ್ದೆಯಡಿ ದಾಖಲಾದ ಮೊದಲ ಪ್ರಕರಣದ ಸುತ್ತ ಇದೀಗ ಹಲವು ಸಂಶಯಗಳು ಮೂಡಿವೆ. ಹೊಸ ಕಾಯ್ದೆಯ ಪ್ರಕಾರವೇ, ಎಲ್ಲಾ ನಿಯಮಗಳನ್ನು ಪಾಲಿಸಿಕೊಂಡು ಜಾನುವಾರು ಸಾಗಾಟ ಮಾಡುತ್ತಿದ್ದ ವ್ಯಕ್ತಿಯ ಮೇಲೆ ಗುಂಪೊಂದು ಮಾರಣಾಂತಿಕ ಹಲ್ಲೆ ನಡೆಸಿದೆ. ಅಲ್ಲದೆ, ಜಾನುವಾರು ಸಾಗಾಟಗಾರನ ಮೇಲೆ ಶೃಂಗೇರಿ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂಬುದಾಗಿ ಆರೋಪಿಸಲಾಗಿದೆ ಎಂದು ‘ನಾನುಗೌರಿ.ಕಾಂ’ ವರದಿ ಮಾಡಿದೆ.

ದಾವಣಗೆರೆಯ ಅಬಿದ್ ಅಲಿ (45) ಹಲವು ವರ್ಷಗಳಿಂದ ಅಧಿಕೃತವಾಗಿ ಜಾನುವಾರು ಸಾಗಾಟ ಮಾಡುವ ಕೆಲಸ ಮಾಡುತ್ತಿದ್ದರು. ಜ.7ರಂದು ತಿದ್ದುಪಡಿಯಾದ ನೂತನ ಕಾಯ್ದೆಯ ಎಲ್ಲಾ ನಿಯಮಗಳನ್ನು ಪಾಲಿಸಿಕೊಂಡು ರಾಣೆಬೆನ್ನೂರಿನಿಂದ ಮಂಗಳೂರಿಗೆ ಕೆಲವು ಜಾನುವಾರುಗಳನ್ನು ಸಾಗಿಸುತ್ತಿದ್ದರು. ಈ ನಡುವೆ, ಶೃಂಗೇರಿಯ ತನಿಕೋಡ್ ಚೆಕ್ ಪೋಸ್ಟ್ ಬಳಿ ಲಾರಿಯನ್ನು ತಡೆಗಟ್ಟಿದ ಗುಂಪೊಂದು ಅಬಿದ್ ಅಲಿಯವರಿಗೆ ಕಬ್ಬಿಣದ ರಾಡ್ ಗಳಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಲಾರಿಯಲ್ಲಿದ್ದ ಮತ್ತೊಬ್ಬ ವ್ಯಕ್ತಿ ಹಲ್ಲೆಕೋರರಿಂದ ತಪ್ಪಿಸಿಕೊಂಡಿದ್ದಾನೆ. ಘಟನೆಯ ನಂತರ ಅಬಿದ್ ಆಲಿ ಆಸ್ಪತ್ರೆಗೆ ದಾಖಲಾಗಿದ್ದು, ಆತನ ವಿರುದ್ಧವೇ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿದ್ದಾರೆ ಎಂದು ವರದಿ ತಿಳಿಸಿದೆ.

ಹಲ್ಲೆಗೊಳಗಾದ ಅಬಿದ್ ಅಲಿಯನ್ನು ಪ್ರಾಥಮಿಕ ಚಿಕಿತ್ಸೆಗೆ ಶೃಂಗೇರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗ ಜಿಲ್ಲಾ ಆಸ್ಪತ್ರೆಗೆ ದಾಖಲಾದ ನಂತರ, ಇನ್ನೂ ಹೆಚ್ಚಿನ ಚಿಕಿತ್ಸೆಗೆ ದಾವಣಗೆರೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸರಕಾರದ ಎಲ್ಲಾ ಅನುಮತಿಗಳನ್ನು ಪಡೆದೇ ತಾನು ಜಾನುವಾರು ಸಾಗಾಟ ಮಾಡಿದ್ದೇನೆ ಎಂದು ಅವರು ಹೇಳಿರುವುದಾಗಿ ವರದಿ ತಿಳಿಸಿದೆ.

ನೂತನ ಕಾನೂನಿನ ಪ್ರಕಾರ ಸರಕಾರದ ಪರವಾನಿಗೆ ಮತ್ತು ಪಶುವೈದ್ಯರ ಅನುಮತಿ ಪತ್ರ ಪಡೆದು ನಾನು ಜಾನುವಾರು ಸಾಗಾಟ ಮಾಡುತ್ತಿದ್ದೆ. ಹೀಗಿರುವಾಗ ನನ್ನ ಮೇಲೆಯೇ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಪೊಲೀಸ್ ಇಲಾಖೆ ಸೂಕ್ತ ತನಿಖೆ ನಡೆಸಿ ನನ್ನ ಮೇಲೆ ಹಾಕಿರುವ ಪ್ರಕರಣವನ್ನು ಹಿಂಪಡೆಯಬೇಕು. ಅಲ್ಲದೆ, ನನ್ನ ಮೇಲೆ ಹಲ್ಲೆ ಮಾಡಿರುವ ಆರೋಪಿಗಳನ್ನು ಪತ್ತೆ ಹಚ್ಚಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅಬಿದ್ ಅಲಿ ತಿಳಿಸಿರುವುದಾಗಿ ‘ನಾನುಗೌರಿ.ಕಾಂ’ ವರದಿ ತಿಳಿಸಿದೆ.

ಅಬಿದ್ ಅಲಿಗೆ ಹಲ್ಲೆ ಮಾಡಿದ್ದಲ್ಲದೆ ಅವರ ಎರಡು ಮೊಬೈಲ್, 22 ಸಾವಿರ ರೂ. ದೋಚಲಾಗಿದೆ. ಅವರ ಅಣ್ಣನ ನಂಬರ್ ಪಡೆದು ಅವರಿಗೂ ಜೀವ ಬೆದರಿಕೆಯೊಡ್ಡಲಾಗಿದೆ. ತಮ್ಮ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ನಾಲ್ಕು ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದ್ದರೂ, ಪೊಲೀಸರು ಇದುವರೆಗೂ ಅವರನ್ನು ಬಂಧಿಸಿಲ್ಲ ಎಂದು ಅಬಿದ್ ಅಲಿ ಹೇಳಿದ್ದಾರೆ.

ತಿದ್ದುಪಡಿಯಾದ ನೂತನ ಜಾನುವಾರು ಹತ್ಯೆ ನಿಷೇಧ ಕಾನೂನಿನಡಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಮೊದಲ ಪ್ರಕರಣ ದಾಖಲಾಗಿದೆ ಎಂದು ಕೆಲವು ದಿನಗಳ ಹಿಂದೆ ಬಾರೀ ಸುದ್ದಿಯಾಗಿತ್ತು.

Join Whatsapp
Exit mobile version