Home ಟಾಪ್ ಸುದ್ದಿಗಳು ಗೋಹತ್ಯೆ ನಿಷೇಧ ಕಾಯ್ದೆಗೆ ವಿರೋಧ | ಗಂಡು ಕರುಗಳೊಂದಿಗೆ ಠಾಣೆ ಮುಂದೆ ಪ್ರತಿಭಟನೆ ಕುಳಿತ ರೈತರು!

ಗೋಹತ್ಯೆ ನಿಷೇಧ ಕಾಯ್ದೆಗೆ ವಿರೋಧ | ಗಂಡು ಕರುಗಳೊಂದಿಗೆ ಠಾಣೆ ಮುಂದೆ ಪ್ರತಿಭಟನೆ ಕುಳಿತ ರೈತರು!

ಬೆಂಗಳೂರು : ರಾಜ್ಯ ಸರಕಾರದ ನೂತನ ಗೋಹತ್ಯೆ ನಿಷೇಧ ಕಾನೂನು ವಿರುದ್ಧ ಆಕ್ರೋಶಕ್ಕೊಳಗಾಗಿರುವ ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆಯ ರೈತರು ಗಂಡು ಕರುಗಳನ್ನು ಪೊಲೀಸ್ ಠಾಣೆ ಮುಂದೆ ತಂದು ಪ್ರತಿಭಟಿಸಿದ್ದಾರೆ.

ಸರಕಾರ ಗೋಹತ್ಯೆ ತಡೆ ಕಾಯ್ದೆಯನ್ನು ಜಾರಿ ಮಾಡಿದೆ. ಇದರಿಂದಾಗಿ ಗಂಡು ಕರುಗಳು, ಗೊಡ್ಡು ಹಸುಗಳು ಸೇರಿದಂತೆ ಅನುಪಯುಕ್ತ ರಾಸುಗಳನ್ನು ಮಾರದಂತೆ ನಿಷೇಧ ಹೇರಿದೆ. ಅವುಗಳನ್ನು ಸಾಕಿ ಸಲಹಲು ನಮ್ಮಿಂದ ಸಾಧ್ಯವಾಗುತ್ತಿಲ್ಲ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರೈತರು ಹೇಳಿದ್ದಾರೆ.

ಸರಕಾರವು ಹೋಬಳಿ ಕೇಂದ್ರಗಳಲ್ಲಿ ಕಡ್ಡಾಯವಾಗಿ ಗೋಶಾಲೆಗಳನ್ನು ತೆರೆಯಬೇಕು. ಅನುಪಯುಕ್ತ ರಾಸುಗಳು ಹಾಗೂ ಸೀಮೆ ಹಸುವಿನ ಗಂಡುಕರುಗಳ ಸಾಕಾಣಿಕೆ ಮಾಡಬೇಕು. ಹಾಗೆ ಮಾಡದೆ ಸುಮ್ಮನೆ ಗೋ ಹತ್ಯೆ ಕಾಯ್ದೆ ತಂದರೆ ನಾವೇನು ಮಾಡುವುದು? ಎಂದು ಅವರು ಪ್ರಶ್ನಿಸಿದ್ದಾರೆ,

ಈಗಾಗಲೇ ರೈತರು ಬೆಳೆಗಳಿಗೆ ಸರಿಯಾದ ಬೆಲೆ ಸಿಗದೇ ನಷ್ಟದಲ್ಲಿದ್ದಾರೆ. ಇಂತಹ ಸಮಯದಲ್ಲಿ ತಂದಿರುವ ಈ ಕಾಯ್ದೆ ರೈತರ ಪಾಲಿಗೆ ಮರಣ ಶಾಸನವಾಗಿದೆ. ಹೀಗಾಗಿ ಕೂಡಲೇ ಸರಕಾರ ಕಾಯ್ದೆ ವಾಪಾಸ್ ಪಡೆಯಬೇಕು. ಇಲ್ಲವಾದಲ್ಲಿ ಪರಿಹಾರ ಒದಗಿಸಬೇಕು ಎಂದು ಪ್ರತಿಭಟನಕಾರರು ಒತ್ತಾಯಿಸಿದ್ದಾರೆ.

ಪೊಲೀಸರಿಗೆ ಮಾಹಿತಿ ನೀಡದೇ ದಿಢೀರನೇ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿದುದರಿಂದ, ಪೊಲೀಸರು ಮತ್ತು ರೈತರ ನಡುವೆ ಕೆಲ ಕಾಲ ವಾಗ್ವಾದ ನಡೆಯಿತು. 

Join Whatsapp
Exit mobile version