ಗೋ ಹತ್ಯೆ ನಿಷೇಧ ಕಾಯ್ದೆ ಬಿಜೆಪಿ ಸರಕಾರದ‌ ಸರ್ವಾಧಿಕಾರಿ ನಡೆ : ಪಾಪ್ಯುಲರ್ ಫ್ರಂಟ್

Prasthutha|

ಬೆಂಗಳೂರು : ಗೋ ಹತ್ಯೆ ನಿಷೇಧ ಕಾಯ್ದೆ ಸೇರಿದಂತೆ ಒಂದರ ಹಿಂದೆ‌ ಒಂದರಂತೆ ಜನವಿರೋಧಿ ಕಾನೂನುಗಳನ್ನು ಜಾರಿಗೆ ತರಲಾಗುತ್ತಿದ್ದು, ಬಿಜೆಪಿ ಸರಕಾರದ‌ ಈ ಸರ್ವಾಧಿಕಾರಿ ನಡೆಯನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜ್ಯಾಧ್ಯಕ್ಷ ಯಾಸಿರ್ ಹಸನ್ ತೀವ್ರವಾಗಿ ಖಂಡಿಸಿದ್ದಾರೆ.

- Advertisement -

ನಿನ್ನೆ ದಿನ ರೈತರ ತೀವ್ರ ಆಕ್ಷೇಪದ ನಡುವೆಯೇ ಕರ್ನಾಟಕ ಭೂ ಸುಧಾರಣಾ ತಿದ್ದುಪಡಿ ಮಸೂದೆಗೆ ಅಂಗೀಕಾರ‌ ನೀಡಿದೆ. ಇಂದು ಗೋ ಹತ್ಯೆ ನಿಷೇಧದ ಮಸೂದೆಯನ್ನು ಅಂಗೀಕರಿಸಿದೆ. ಮೇಲ್ನೋಟಕ್ಕೆ ಇದು ಮುಸ್ಲಿಮರನ್ನು ಬೇಟೆಯಾಡಲು ಬಳಸುವಂತಹ ಕಾನೂನಾಗಿದ್ದರೂ, ಆಳದಲ್ಲಿ ಕೃಷಿಕ ಸಮುದಾಯವೇ ಇದಕ್ಕೆ ಬಲಿಪಶುವಾಗಲಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಒಂದೆಡೆ, ಭೂ ಸುಧಾರಣೆ ಕಾನೂನಿನ ಹೆಸರಿನಲ್ಲಿ ಕೃಷಿ ಭೂಮಿಯನ್ನು ಕಾರ್ಪೊರೇಟ್ ಕುಳಗಳ ಪಾದಬುಡಕ್ಕೆ ಒಪ್ಪಿಸುವ ಹುನ್ನಾರದಲ್ಲಿ ಬಿಜೆಪಿ ಯಶಸ್ಸು ಕಂಡಿದೆ. ಮತ್ತೊಂದೆಡೆ, ಗೋಹತ್ಯೆ ನಿಷೇಧದ‌ ಕಾನೂನು ಅಂಗೀಕರಿಸಿ ಅನುಪಯುಕ್ತ ಜಾನುವಾರುಗಳನ್ನು ಸಾಕುವ ತಾಳಲಾರದ ಹೊರೆಯನ್ನು ರೈತರ ಹೆಗಲಿಗೇರಿಸಿದೆ. ಕೊರೋನ ಪರಿಸ್ಥಿತಿ ನಿಭಾಯಿಸುವಲ್ಲಿ ಮತ್ತು ನೆರೆ ಸಂತ್ರಸ್ತರಿಗೆ ಪರಿಹಾರ ನೀಡುವಲ್ಲಿ ಘೋರ ವೈಫಲ್ಯ ಕಂಡಿರುವ ಹೊಣೆಗೇಡಿ ಬಿಜೆಪಿ ಸರಕಾರವು ಇಂತಹ ತಲೆಬುಡವಿಲ್ಲದ ಜನ ವಿರೋಧಿ, ರೈತ‌ ವಿರೋಧಿ ಕಾನೂನುಗಳ‌ನ್ನು ತಂದು ಜನ ಸಾಮಾನ್ಯರ ಬದುಕಿನಲ್ಲಿ ಚೆಲ್ಲಾಟವಾಡುತ್ತಿದೆ ಎಂದು ಅವರು ತಿಳಿಸಿದ್ದಾರೆ.

- Advertisement -

ಬಿಜೆಪಿ ಸರಕಾರದ‌ ಅವಧಿಯಲ್ಲಿ ದನದ‌ ಮಾಂಸದ‌ ರಫ್ತಿನಲ್ಲಿ ಭಾರತ ನಂಬರ್‌ 1 ಸ್ಥಾನಕ್ಕೆ ಏರಿರುವುದು ಬಹಿರಂಗ ಸತ್ಯ. ಆದರೆ‌ ಇದೀಗ‌‌ ಬಿಜೆಪಿ ಸರಕಾರ ಗೋರಕ್ಷಣೆಯ ಕಾನೂನಿನ ಹೆಸರಿನಲ್ಲಿ ಬೂಟಾಟಿಕೆಯ‌‌ನ್ನು ಪ್ರದರ್ಶಿಸುತ್ತಿದೆ. ಜನರು ಇಂತಹ ಮಾರಕ ಕಾನೂನುಗಳ ವಿರುದ್ಧ ಬಲವಾಗಿ ಧ್ವನಿ ಎತ್ತಬೇಕೆಂದು ಯಾಸಿರ್ ಹಸನ್ ಕರೆ ನೀಡಿದ್ದಾರೆ.  

Join Whatsapp