Home ಟಾಪ್ ಸುದ್ದಿಗಳು ಸಬರಮತಿ ನದಿಯ ನೀರಿನಲ್ಲಿ ಕೋವಿಡ್ ವೈರಸ್ ಪತ್ತೆ!

ಸಬರಮತಿ ನದಿಯ ನೀರಿನಲ್ಲಿ ಕೋವಿಡ್ ವೈರಸ್ ಪತ್ತೆ!

ಇದು ಅಪಾಯಕಾರಿ ಎಂದ ತಜ್ಞರು!

ಅಹಮದಾಬಾದ್ ನ ಸಬರಮತಿ ನದಿಯ ನೀರಿನ ಮಾದರಿಗಳಲ್ಲಿ ಕೋವಿಡ್ ವೈರಸ್ ಇರುವಿಕೆಯನ್ನು ಪತ್ತೆ ಹಚ್ಚಲಾಗಿದ್ದು, ನಗರದ ಕ್ಯಾಂಕ್ರಿಯಾ ಮತ್ತು ಚಂದೋಲಾ ಸರೋವರಗಳಿಂದ ತೆಗೆದ ಮಾದರಿಗಳಲ್ಲಿಯೂ ಈ ವೈರಸ್ ಪತ್ತೆಯಾಗಿದೆ ಎಂದು ವರದಿಯಾಗಿದೆ.

ಐಐಟಿ ಗಾಂಧಿನಗರ ಮತ್ತು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಪರಿಸರ ವಿಜ್ಞಾನದ ಸಂಶೋಧಕರು ಸಬರಮತಿ ನದಿ, ಚಂದೋಲಾ ಮತ್ತು ಕ್ಯಾಂಕ್ರಿಯಾ ಸರೋವರಗಳಿಂದ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೊಳಪಡಿಸಿದ್ದರು. ಈ ಕುರಿತು ಪ್ರತಿಕ್ರಿಯಿಸಿದ ಐಐಟಿ ಗಾಂಧಿನಗರದ ಭೂ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಮನೀಶ್ ಕುಮಾರ್, ಸರೋವರಗಳು ಮತ್ತು ನದಿಗಳಲ್ಲಿ SARS-CoV-2 ಇರುವುದು ಅಪಾಯಕಾರಿ ಪರಿಸ್ಥಿತಿಗಳಿಗೆ ಕಾರಣವಾಗಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಸಬರಮತಿ ನದಿಯಿಂದ 694 ಮಾದರಿಗಳನ್ನು, ಚಂದೋಲಾ ಸರೋವರದಿಂದ 549 ಮಾದರಿಗಳನ್ನು ಮತ್ತು ಕ್ಯಾಂಕ್ರಿಯಾ ಸರೋವರದಿಂದ 402 ಮಾದರಿಗಳನ್ನು ಸಂಗ್ರಹಿಸಲಾಗಿದೆ. ದೇಶಾದ್ಯಂತ ಇದೇ ರೀತಿಯ ಪ್ರಯೋಗಗಳನ್ನು ನಡೆಸಬೇಕು. ವೈರಸ್ ನೈಸರ್ಗಿಕ ನೀರಿನಲ್ಲಿ ಹೆಚ್ಚು ಕಾಲ ಬದುಕುವ ಸಾಮಾರ್ಥ್ಯವನ್ನು ಹೊಂದಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಈ ಹಿಂದೆ ಉತ್ತರ ಪ್ರದೇಶ ಮತ್ತು ಬಿಹಾರದ ಗಂಗಾ ನದಿಯಲ್ಲಿ ಕೋವಿಡ್ ಸೋಂಕಿತರ ಶವಗಳು ಪತ್ತೆಯಾಗಿದ್ದು, 100 ಕ್ಕೂ ಹೆಚ್ಚು ಶವಗಳನ್ನು ನದಿಯಲ್ಲಿ ಎಸೆಯಲಾಗಿದೆ ಎಂದು ವರದಿಯಾಗಿತ್ತು.

Join Whatsapp
Exit mobile version