ಜಿನೆವಾ: ಪ್ರಪಂಚದ 24 ದೇಶಗಳಿಗೆ ಕೋವಿಡ್ ರೂಪಾಂತರಿ ‘ಓಮಿಕ್ರಾನ್’ ಹರಡಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ವ್ಯಾಕ್ಸಿನೇಷನ್ ಮತ್ತು ಪರೀಕ್ಷೆಗಳ ಕಡಿಮೆ ಡೇಟಾದ ಕಾರಣ ಕೊರೋನಾ ರೂಪಾಂತರಗಳು ಹೊರಹೊಮ್ಮುತ್ತಿವೆ ಎಂದು WHO ಮುಖ್ಯಸ್ಥ ಡಾ. ಟೆಡ್ರೊಸ್ ಘೆಬ್ರೆಯೆಸಸ್ ಮಾಹಿತಿ ನೀಡಿದ್ದಾರೆ.
ಭವಿಷ್ಯದಲ್ಲಿ ಕೊರೋನಾದ ಅನೇಕ ಇತರ ರೂಪಾಂತರಗಳು ಹೊರಹೊಮ್ಮುತ್ತವೆ ಎಂದು ಟೆಡ್ರೊಸ್ ಎಚ್ಚರಿಸಿದ್ದಾರೆ. ವಿಷಕಾರಿ ಮಿಶ್ರಣದಂತಹ ಪರಿಸ್ಥಿತಿ ಈ ಎರಡು ಕಾರಣಗಳಿಂದ ನಿರ್ಮಾಣವಾಗುತ್ತಿದೆ, ಈ ಕಾರಣದಿಂದಾಗಿಯೇ ಕೊರೋನಾ ವಿಭಿನ್ನ ರೂಪಾಂತರಗಳಲ್ಲಿ ನಮ್ಮ ಮೇಲೆ ಆಕ್ರಮಣ ಮಾಡುತ್ತಿದೆ. ಓಮಿಕ್ರಾನ್ ಇದಕ್ಕೆ ಉದಾಹರಣೆ ಎಂದಿದ್ದಾರೆ.
ಒಮಿಕ್ರಾನ್ ಈವರೆಗೆ ಅಮೆರಿಕಾ, ಆಸ್ಟ್ರೇಲಿಯಾ, ಆಸ್ಟ್ರಿಯಾ, ಬೆಲ್ಜಿಯಂ, ಬೋಟ್ಸ್ವಾನಾ, ಕೆನಡಾ, ಜೆಕ್ ರಿಪಬ್ಲಿಕ್, ಡೆನ್ಮಾರ್ಕ್, ಜರ್ಮನಿ, ಹಾಂಗ್ ಕಾಂಗ್, ಇಸ್ರೇಲ್, ಇಟಲಿ, ಜಪಾನ್, ನೆದರ್ಲ್ಯಾಂಡ್ಸ್, ನೈಜೀರಿಯಾ, ಪೋರ್ಚುಗಲ್, ರಿಯೂನಿಯನ್, ಸೌದಿ ಅರೇಬಿಯಾ, ದಕ್ಷಿಣ ಆಫ್ರಿಕಾ , ಸ್ಪೇನ್, ಸ್ವೀಡನ್, ಸ್ವಿಟ್ಜರ್ಲೆಂಡ್, ಯುಕೆ ಮತ್ತು ದಕ್ಷಿಣ ಕೊರಿಯಾದಲ್ಲಿ ಪತ್ತೆಯಾಗಿದೆ ಎಂದು ವರದಿಯಾಗಿದೆ.
ಎಲ್ಲ ದೇಶಗಳು ಈ ರೂಪಾಂತರವನ್ನು ಬಹಳ ಗಂಭೀರವಾಗಿ ಪರಿಗಣಿಸಬೇಕು ಎಂದು ಅವರು ಹೇಳಿದ್ದಾರೆ. ಅಲ್ಲದೇ ವಿಶ್ವ ಆರೋಗ್ಯ ಸಂಸ್ಥೆಯು ಒಮಿಕ್ರಾನ್ ಬಗ್ಗೆ ನಿರಂತರವಾಗಿ ಅಧ್ಯಯನ ನಡೆಸುತ್ತಿದೆ ಎಂದಿದ್ದಾರೆ.