ಕುಂಭಮೇಳದಿಂದ ಕರ್ನಾಟಕಕ್ಕೆ ವಾಪಸ್ಸಾದವರಿಗೆ ಕೋವಿಡ್ ಪರೀಕ್ಷೆ ಕಡ್ಡಾಯ : ಆರೋಗ್ಯ ಸಚಿವ ಕೆ ಸುಧಾಕರ್

Prasthutha|

ಹೊಸದಿಲ್ಲಿ : ಕೊರೊನಾ ವೈರಸ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ನಡುವೆ ಉತ್ತರಾಖಂಡದ ಹರಿದ್ವಾರದಲ್ಲಿ ಲಕ್ಷಾಂತರ ಮಂದಿ ಕೋವಿಡ್ ಮುನ್ನೆಚ್ಚರಿಕೆಗಳಿಲ್ಲದೆ ಕುಂಭಮೇಳದಲ್ಲಿ ಭಾಗವಹಿಸುತ್ತಿದ್ದು, ಕೊರೋನಾ ಹಾಟ್ ಸ್ಪಾಟ್ ಎಂದೇ ಹೇಳಲಾಗುತ್ತಿದೆ. ಕುಂಭ ಮೇಳದಿಂದಾಗಿ ದೇಶದೆಲ್ಲೆಡೆ ಸೋಂಕು ಹರಡುವ ಆತಂಕ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹರಿದ್ವಾರದಿಂದ ಕರ್ನಾಟಕಕ್ಕೆ ವಾಪಸ್ ಆಗುವ ಯಾತ್ರಿಕರಿಗೆ ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಟ್ವೀಟ್ ಮಾಡಿದ್ದಾರೆ.

“ಹರಿದ್ವಾರದಲ್ಲಿ ನಡೆಯುತ್ತಿರುವ ಪವಿತ್ರ ಕುಂಭಮೇಳದಲ್ಲಿ ಪಾಲ್ಗೊಂಡು ರಾಜ್ಯಕ್ಕೆ ಮರಳುವ ಯಾತ್ರಿಗಳು ವಾಪಸ್ಸಾದ ಬಳಿಕ ಕಡ್ಡಾಯವಾಗಿ ತಮ್ಮ ಮನೆಗಳಲ್ಲಿ ಪ್ರತ್ಯೇಕಗೊಂಡು ಕೊರೊನಾ ಪರೀಕ್ಷೆಗೆ ಒಳಪಡಬೇಕು. ಕೊರೊನಾ ಪರೀಕ್ಷೆ ವರದಿಯಲ್ಲಿ ನೆಗಟಿವ್ ಬಂದ ನಂತರವಷ್ಟೇ ಯಾತ್ರಿಕರು ತಮ್ಮ ಎಂದಿನ ಕಾರ್ಯಗಳಲ್ಲಿ ತೊಡಗಬೇಕೆಂದು ಮನವಿ ಮಾಡುತ್ತೇನೆ” ಎಂದು ಸಚಿವ ಡಾ. ಕೆ ಸುಧಾಕರ್ ಟ್ವೀಟ್ ಮಾಡಿದ್ದಾರೆ.

- Advertisement -

ಕೋವಿಡ್ ಮುನ್ನೆಚ್ಚರಿಕೆಗಳಿಲ್ಲದೆ ಹರಿದ್ವಾರದ ಕುಂಭಮೇಳದಲ್ಲಿ ಭಾಗವಹಿಸಿದ ಸಾವಿರಾರು ಯಾತ್ರಿಕರಲ್ಲಿ ಕೊರೊನಾವೈರಸ್ ಸೋಂಕು ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಹೊಸ ನಿಯಮವನ್ನು ಜಾರಿಗೊಳಿಸಿದೆ. ಶಾಹಿ ಸ್ನಾನ್ ಮುಗಿಸಿ ಮರಳಿದ ಪ್ರತಿಯೊಬ್ಬರು ಕಡ್ಡಾಯವಾಗಿ ಕೊವಿಡ್-19 ಸೋಂಕಿನ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಆದೇಶಿಸಲಾಗಿದೆ.

ಬುಧವಾರ ಒಂದೇ ದಿನ ಹರಿದ್ವಾರದಲ್ಲಿ 525 ಮಂದಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಹರಿದ್ವಾರದಲ್ಲಿ ಕಳೆದ ಐದು ದಿನಗಳಲ್ಲಿ 2167 ಜನರಿಗೆ ಸೋಂಕು ಪತ್ತೆಯಾಗಿದೆ. ಹರಿದ್ವಾರದಲ್ಲಿ ಏಪ್ರಿಲ್ 14ರಂದು ಲಕ್ಷಾಂತರ ಜನರು ಶಾಹಿ ಸ್ನಾನ್(ಪುಣ್ಯ ಸ್ನಾನ) ಮಾಡಿದ್ದಾರೆ. ಬುಧವಾರವೊಂದೇ ದಿನ 9 ಲಕ್ಷ ಜನರು ಗಂಗೆಯಲ್ಲಿ ಸ್ನಾನ ಮಾಡಿದ್ದಾರೆ ಎಂದು ಆಡಳಿತ ಮಂಡಳಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

- Advertisement -