ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕಿತರ ಸಂಖ್ಯೆ: ಕರ್ಫ್ಯೂ ಜಾರಿ ಸಾಧ್ಯತೆ!

Prasthutha|

ಒಂದು ಮನೆಯಲ್ಲಿ 3 ಸೋಂಕಿತರು ಪತ್ತೆಯಾದರೆ ಮನೆ ಸೀಲ್ ಡೌನ್ ಗೆ ಬಿಬಿಎಂಪಿ ನಿರ್ಧಾರ

- Advertisement -

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಮೂರನೇ ಅಲೆ ಬಗೆಗಿನ ಆತಂಕ ಹೆಚ್ಚಾಗತೊಡಗಿದೆ. ಕೊರೊನಾ ಎರಡನೇ ಅಲೆಯನ್ನು ನಿಯಂತ್ರಿಸಲು ರಾಜ್ಯ ಸರ್ಕಾರ ಲಾಕ್​ಡೌನ್ ಘೋಷಣೆ ಮಾಡಿತ್ತು. ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದ್ದಂತೆ ಲಾಕ್​ಡೌನ್​ ತೆರವುಗೊಳಿಸಲಾಯಿತು. ಆದರೆ ಇದೀಗ ಮತ್ತೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದು ಜನಸಾಮಾನ್ಯರಿಗೆ ಆತಂಕ ಮತ್ತು ಭಯವನ್ನು ಉಂಟು ಮಾಡಿವೆ.

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನೆಲೆ ಕಟ್ಟುನಿಟ್ಟಿನ ಕ್ರಮಕ್ಕೆ ಬಿಬಿಎಂಪಿ ಮುಂದಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಬಿಬಿಎಂಪಿ ವಿಶೇಷ ಆಯುಕ್ತ ಡಿ.ರಂದೀಪ್, ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದೆ.‌ ಹೀಗಾಗಿ ಸೀಲ್ ಡೌನ್ ಅಸ್ತ್ರ ಪ್ರಯೋಗ ಮಾಡುವುದು ಅನಿವಾರ್ಯವಾದಂತಿದೆ. ಮೂರು ಸೋಂಕಿತರು ಒಂದೇ ಮನೆಯಲ್ಲಿ ಪತ್ತೆಯಾದರೆ ಆ ಮನೆಗಳನ್ನ ಸೀಲ್ ಡೌನ್ ಮಾಡುತ್ತೇವೆ ಎಂದು ಹೇಳಿದ್ದಾರೆ.

- Advertisement -

ಇನ್ನು ಐದು ಪ್ರಕರಣಗಳು ಪತ್ತೆಯಾಗುವ ಪ್ರದೇಶವನ್ನ ಸೀಲ್ ಡೌನ್ ಮಾಡಲಾಗುತ್ತದೆ. 10 ಕೇಸ್​ಗಳು ಪತ್ತೆಯಾಗುವ ಸ್ಟ್ರೀಟ್, ರಸ್ತೆಗಳನ್ನೇ ಸೀಲ್ ಡೌನ್ ಮಾಡುತ್ತೇವೆ. ನಗರದಲ್ಲಿ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನೆಲೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದೇವೆ. ಮಾರ್ಕೆಟ್​ಗಳಿಗೆ ಹೋಗಿ ಬಂದವರಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿದೆ. ಈಗಾಗಲೇ ಸರ್ಕಾರಕ್ಕೆ ನಮ್ಮ ವರದಿ ನೀಡಲಾಗಿದೆ. ಸೋಂಕಿತರ ಸಂಖ್ಯೆ ಏರಿಕೆಯಾದರೆ ಸರ್ಕಾರದ ಹಂತದಲ್ಲಿ ಕರ್ಫ್ಯೂಗಳನ್ನ ಜಾರಿ ಮಾಡುವ ಸಾಧ್ಯತೆಯಿದೆ. ಜೊತೆಗೆ ಬೇರೆ ರೀತಿಯ ಕ್ರಮಕ್ಕೂ ಮುಂದಾಗಬಹುದು. ಅದನ್ನು ಸರ್ಕಾರ ನಿರ್ಧಾರ ಮಾಡುತ್ತದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ ಡಿ.ರಂದೀಪ್ ಹೇಳಿದ್ದಾರೆ.

72 ಮನೆಗಳು ಸೀಲ್‌ ಡೌನ್​ :
ಯಲಹಂಕದ ಸುರಭಿ ಲೇಔಟ್‌ನಲ್ಲಿರುವ ಒಂದೇ ಮನೆಯಲ್ಲಿ ಐವರಿಗೆ ಕೊರೊನಾ ಸೋಂಕು ದೃಢವಾಗಿದ್ದು, ಸೋಂಕಿತರ ಮನೆಯನ್ನು ಬಿಬಿಎಂಪಿ ಅಧಿಕಾರಿಗಳು ಸೀಲ್‌ ಡೌನ್ ಮಾಡಿದ್ದಾರೆ. ಜೊತೆಗೆ ಯಶವಂತಪುರದ ಬೆಲ್ ಅಪಾರ್ಟ್​ಮೆಂಟ್​​ನಲ್ಲಿ 16 ಕೇಸ್​ಗಳು ಪತ್ತೆಯಾದ ಹಿನ್ನೆಲೆ ಅಪಾರ್ಟ್​ಮೆಂಟ್ ಎ ಬ್ಲಾಕ್​ನ ಸೀಲ್​ ಡೌನ್​ ಮಾಡಿದ್ದಾರೆ. ಧಾರವಾಡ, ದೆಹಲಿಗೆ ಪ್ರಯಾಣ ಮಾಡಿ ವಾಪಸ್ ಆದವರಲ್ಲಿ ಕೊರೊನಾ ಕಾಣಿಸಿಕೊಂಡಿದೆ. ಎ ಬ್ಲಾಕ್‌ನಲ್ಲಿರುವ ಸುಮಾರು 72 ಮನೆಗಳು ಸೀಲ್‌ ಡೌನ್ ಮಾಡಲಾಗಿದೆ

Join Whatsapp