Home Uncategorized ‘ಕೋವಿಡ್ ಆರೈಕೆ ಕೇಂದ್ರ’: ಅಗತ್ಯ ಸಿದ್ಧತೆಗೆ ಡಾ.ಸತೀಶ ಸೂಚನೆ

‘ಕೋವಿಡ್ ಆರೈಕೆ ಕೇಂದ್ರ’: ಅಗತ್ಯ ಸಿದ್ಧತೆಗೆ ಡಾ.ಸತೀಶ ಸೂಚನೆ

ಮಡಿಕೇರಿ:ರಾಷ್ಟ್ರದಲ್ಲಿ ಕೋವಿಡ್ ಮೂರನೇ ಅಲೆ ಆರಂಭವಾಗಿರುವ ಹಿನ್ನೆಲೆ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾದಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವ ಸಂಬಂಧ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ವಿವಿಧ ಅಧಿಕಾರಿಗಳ ಜೊತೆ ಚರ್ಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ವಿವಿಧ ಇಲಾಖೆ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದ ಜಿಲ್ಲಾಧಿಕಾರಿ ಅವರು, ಕೋವಿಡ್ ಪ್ರಕರಣಗಳು ಹೆಚ್ಚಾದಲ್ಲಿ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕಿದ್ದು, ಆ ನಿಟ್ಟಿನಲ್ಲಿ ಕಳೆದ ಬಾರಿಯಂತೆ ಜಿಲ್ಲೆಯ 5 ತಾಲ್ಲೂಕು ವ್ಯಾಪ್ತಿಯಲ್ಲಿ ‘ಕೋವಿಡ್ ಆರೈಕೆ ಕೇಂದ್ರ’ ಆರಂಭಿಸಲು ಅಗತ್ಯ ಕ್ರಮವಹಿಸಬೇಕಿದೆ ಎಂದು ಜಿಲ್ಲಾಧಿಕಾರಿ ಅವರು ಹೇಳಿದರು.  

ಕೋವಿಡ್ ಆರೈಕೆ ಕೇಂದ್ರಗಳನ್ನು ಆದ್ಯತೆ ಮೇಲೆ ಪ್ರತೀ ತಾಲ್ಲೂಕಿನಲ್ಲಿ ಆರಂಭಿಸಬೇಕಿದೆ. ಆ ನಿಟ್ಟಿನಲ್ಲಿ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು. ಈ ಸಂಬಂಧ ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗುವುದು ಎಂದು ಜಿಲ್ಲಾಧಿಕಾರಿ ಅವರು ಹೇಳಿದರು.

ಕೋವಿಡ್ ನಿಯಂತ್ರಣ ಸಂಬಂಧ ಸರ್ಕಾರದ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಬೇಕು. ಕೋವಿಡ್ ಗುಣಲಕ್ಷಣಗಳು ಕಂಡುಬಂದಲ್ಲಿ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳುವುದು. ಸಂಪರ್ಕಿತರನ್ನು ಪತ್ತೆ ಹಚ್ಚುವುದು, ಮತ್ತಿತರ ಕಾರ್ಯ ನಿರ್ವಹಿಸಬೇಕಿದೆ. ಹಾಗೆಯೇ ಗಡಿ ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸಬೇಕಿದೆ ಎಂದು ಜಿಲ್ಲಾಧಿಕಾರಿ ಅವರು ಸೂಚಿಸಿದರು.

ಕೋವಿಡ್ ನಿಯಂತ್ರಣ ಸಂಬಂಧ  ಮೊದಲ ಮತ್ತು ಎರಡನೇ ಅಲೆ ಅವಧಿಯಲ್ಲಿ ಕೈಗೊಳ್ಳಲಾಗಿದ್ದ ಮುನ್ನೆಚ್ಚರಿಕಾ ಕ್ರಮಗಳನ್ನು, ಮೂರನೇ ಅಲೆ ಸಂದರ್ಭದಲ್ಲೂ ಕೈಗೊಳ್ಳಬೇಕಿದೆ ಎಂದು ಜಿಲ್ಲಾಧಿಕಾರಿ ಅವರು ಹೇಳಿದರು. 

ಕೋವಿಡ್ ಆರೈಕೆ ಕೇಂದ್ರ ಸ್ಥಾಪನೆ, ಜೊತೆಗೆ ಅಗತ್ಯ ಆಮ್ಲಜನಕ ದಾಸ್ತಾನು ಮಾಡಿಕೊಳ್ಳುವುದು ಮತ್ತಿತರ ಬಗ್ಗೆ ಗಮನಹರಿಸುವಂತೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಅವರು ಸೂಚಿಸಿದರು.

‘ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಆರ್.ವೆಂಕಟೇಶ್ ಅವರು ಮಾಹಿತಿ ನೀಡಿ ಜಿಲ್ಲೆಯಲ್ಲಿ ಪಾಸಿಟಿವಿಟಿ ಪ್ರಮಾಣ ಸರಾಸರಿ ಒಂದರೊಳಗೆ ಇದ್ದು, ಆತಂಕ ಪಡುವ ಅಗತ್ಯವಿಲ್ಲ, ಆದರೂ ಮುನ್ನೆಚ್ಚರ ವಹಿಸುವುದು ಅಗತ್ಯ ಎಂದು ಅವರು ಹೇಳಿದರು.’

ಕೋವಿಡ್ ನಿಯಂತ್ರಣ ಸಂಬಂಧ ಸರ್ಕಾರದ ಮಾರ್ಗಸೂಚಿಯನ್ನು ಪ್ರತಿಯೊಬ್ಬರೂ ಪಾಲಿಸಬೇಕು. ಮಾಸ್ಕ್ ಧರಿಸುವುದು, ಅಂತರ ಕಾಯ್ದುಕೊಳ್ಳುವುದು, ಆಗಾಗ ಸ್ಯಾನಿಟೈಸರ್/ ಸೋಪ್ ಬಳಸಿ ಕೈತೊಳೆಯುವುದು, ಹೀಗೆ ಹಲವು ಕಾರ್ಯಗಳನ್ನು ಮಾಡಬೇಕಿದೆ ಎಂದು ಅವರು ಹೇಳಿದರು.

ಕೋವಿಡ್ ಗುಣಲಕ್ಷಣಗಳು ಕಂಡುಬಂದಲ್ಲಿ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕು. ಕೋವಿಡ್ ಆರೈಕೆ ಕೇಂದ್ರಕ್ಕೆ ದಾಖಲು ಆಗಬೇಕು. ಇತರರಿಗೆ ಹರಡುವುದನ್ನು ತಡೆಯಬೇಕು. ಹೋಂ ಐಸೋಲೇಷನ್ ಉತ್ತಮವಾಗಿದ್ದಲ್ಲಿ ಅಲ್ಲಿಯೂ ಸಹ ಪ್ರತ್ಯೇಕ ಇರಬಹುದಾಗಿದೆ ಎಂದು ಅವರು ತಿಳಿಸಿದರು.

ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರಾದ ಶೇಖರ್ ಅವರು ಕಳೆದ ಮೊದಲ ಮತ್ತು ಎರಡನೇ ಅಲೆ ಸಂದರ್ಭದಲ್ಲಿ  ಮಡಿಕೇರಿ ತಾಲ್ಲೂಕಿಗೆ ಸಂಬಂಧಿಸಿದಂತೆ ಕೊಡಗು ವೈದ್ಯಕೀಯ ವಿಜ್ಞಾನ ಕಾಲೇಜು, ನವೋದಯ ಶಾಲೆ, ಮೊರಾರ್ಜಿ ದೇಸಾಯಿ ಶಾಲೆಗಳು ಹೀಗೆ ಹಲವು ಕಡೆಗಳಲ್ಲಿ ಕೋವಿಡ್ ಆರೈಕೆ ಕೇಂದ್ರ ಆರಂಭಿಸಲಾಗಿತ್ತು ಎಂದು ಅವರು ಮಾಹಿತಿ ನೀಡಿದರು.

Join Whatsapp
Exit mobile version