ಬೆಂಗಳೂರು: ವಿಶ್ವದಾದ್ಯಂತ ಮಹಾಮಾರಿ ಕೊರೋನಾ ಜನರನ್ನು ಮಾನಸಿಕವಾಗಿಯೂ ದೈಹಿಕವಾಗಿಯೂ ದೂರಾಗುವಂತೆ ಮಾಡಿದ್ದು, ಕೊರೊನಾ ಕರಾಳತೆಗೆ ಸಿಲುಕಿ ಮೃತಪಟ್ಟವರ ಅಂತ್ಯಸಂಸ್ಕಾರದಲ್ಲಿ ಸಂಬಂಧಿಕರಿರಲಿ ಸ್ವತಃ ಕುಟುಂಬಸ್ಥರು ಕೂಡ ಭಾಗಿಯಾಗಲು ಹೆದರುವಂತಾಗಿದೆ. ಪ್ರಸ್ತುತದ ಪರಿಸ್ಥಿತಿಯಲ್ಲಿ ಕೊರೋನಾ ಭೀತಿಯಿಂದ ಮೃತಪಟ್ಟವರ ದೇಹವನ್ನು ಮುಟ್ಟಲು ಕೂಡ ಕೆಲ ಕುಟುಂಬಸ್ಥರು ಮುಂದಾಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ಬೆಂಗಳೂರಿನ ಈ ಇಬ್ಬರು ವಿದ್ಯಾರ್ಥಿನಿಯರು ಇತರರಿಗೆ ಮಾದರಿಯಾಗಿದ್ದು, ಕೊರೊನಾ ಆತಂಕದಲ್ಲೂ ಸಾಮಾಜಿಕ ಬದ್ಧತೆ ಮೆರೆದಿದ್ದಾರೆ.
ಆಪ್ತ ಸಂಬಂಧಿಕರೇ ದೂರ ಸರಿಯುವ ಈ ಕಾಲದಲ್ಲಿ ಯುವತಿಯರು ಸ್ಮಶಾನ ಸೇವೆ ಮಾಡುತ್ತಿದ್ದಾರೆ. ಬೆಂಗಳೂರಿನ ನಿಕೋಲೆ ಫೊರ್ಟಾಡೋ (20), ಟೀನಾ ಚೆರಿಯನ್ (21) ಎಂಬ ಕಾಲೇಜು ವಿದ್ಯಾರ್ಥಿನಿಯರಿಬ್ಬರು ಹೊಸೂರು ಮುಖ್ಯರಸ್ತೆಯಲ್ಲಿರುವ ಸ್ಮಶಾನದಲ್ಲಿ ದಿನದಲ್ಲಿ ತಮಗೆ ಸಾಧ್ಯವಾಷ್ಟು ಸೋಂಕಿನಿಂದ ಮೃತಪಟ್ಟವರ ಮೃತದೇಹಗಳನ್ನು ತೆಗೆದುಕೊಂಡು ಹೋಗಿ ಗೌರವಯುವ ಅಂತ್ಯಸಂಸ್ಕಾರ ನಡೆಸುತ್ತಿದ್ದಾರೆ.
ಕೊರೋನಾ ಮೃತದೇಹಗಳನ್ನು ಅಂತ್ಯಸಂಸ್ಕಾರ ಮಾಡುವ ಒಂದು ತಂಡದೊಂದಿಗೆ ಈ ಇಬ್ಬರು ಯುವತಿಯರು ಮೃತರ ಕುಟುಂಬಕ್ಕೆ ನೆರವಾಗುತ್ತಿದ್ದಾರೆ. ನಮ್ಮ ಕುಟುಂಬಸ್ಥರು ಕೊರೋನಾ ಪರಿಹಾರ ಕಾರ್ಯಗಳನ್ನು ಮಾಡುತ್ತಿದ್ದಾರೆ. ಅದರಿಂದ ನಾವು ಪ್ರೇರಣೆಗೊಂಡಿದ್ದೇವೆ. ಇತರರಿಗೆ ಸಹಾಯ ಮಾಡಲು ನನಗೆ ಸಾಕಷ್ಟು ಸಂತೋಷವಾಗುತ್ತಿದೆ. ಎಲ್ಲದರಲ್ಲೂ ಅಪಾಯ ಇದ್ದೇ ಇರುತ್ತದೆ. ಮನೆಯಲ್ಲಿ ಒಬ್ಬಂಟಿಯಾಗಿ ಕೂರುವುದು ಮತ್ತಷ್ಟು ಸಮಸ್ಯೆಯನ್ನು ಎದುರು ಮಾಡುತ್ತದೆ ಎಂದು ವಿದ್ಯಾರ್ಥಿನಿಯರು ಹೇಳಿದ್ದಾರೆ.