ಮಂಗಳೂರು: ಕಳೆದ ಕೆಲವು ದಿನಗಳಿಂದ ಚರ್ಚೆಯಲ್ಲಿದ್ದ ಮುಸ್ಲಿಮ್ ವಿದ್ಯಾರ್ಥಿನಿಯರ ಶಿರವಸ್ತ್ರದ ವಿವಾದ ಕೋರ್ಟ್ ಮೆಟ್ಟಲೇರಿದ ನಂತರ ಇದೀಗ ತೀರ್ಪು ಹೊರ ಬಿದ್ದಿದೆ. ಕೋರ್ಟ್ ತೀರ್ಪು ಬಗ್ಗೆ ಗೌರವವಿದೆ. ಆದರೆ ಈ ತೀರ್ಪಿನ ಬಗ್ಗೆ ಸಮುದಾಯಕ್ಕೆ ತೀವ್ರ ಅಸಮಾಧಾನ ಉಂಟಾಗಿದೆ ಎಂದು ಸಮಸ್ತ ಜಂಇಯ್ಯತುಲ್ ಖುತಬಾ (ಖತೀಬರ ಒಕ್ಕೂಟ) ದ.ಕ. ಜಿಲ್ಲಾ ಸಮಿತಿಯು ಅಭಿಪ್ರಾಯ ಪಟ್ಟಿದೆ.
ಸಂವಿಧಾನ ಜನರಿಗೆ ನೀಡಿದ ಧಾರ್ಮಿಕ ಸ್ವಾತಂತ್ರ್ಯಕ್ಕೆ ಕೋರ್ಟ್ ನ ಈ ತೀರ್ಪಿನ ಮೂಲಕ ಅಡ್ಡಿಯುಂಟಾಗಲಿದೆ. ಅದೇ ರೀತಿ ಜಾತಿ ಆಧಾರದಲ್ಲಿ ಬಹಿರಂಗವಾಗಿಯೇ ದೇಶದ ಪ್ರಜೆಗಳ ಮಧ್ಯೆ ತಾರತಮ್ಯ ನೀತಿ ಅನುಸರಿಸುತ್ತಿರುವ ಸರಕಾರಗಳು ಹೊರಡಿಸುವ ಕೆಲವು ಕೋಮು ಸೂಕ್ಷ್ಮ ಆದೇಶಗಳಿಗೆ ಕಾನೂನಿನ ಮಾನ್ಯತೆ ನೀಡಿದರೆ ಭವಿಷ್ಯದಲ್ಲಿ ದೇಶದ ಹಿತಾಸಕ್ತಿಗೆ ಅದು ಮಾರಕವಾಗಲಿದೆ.
ವಿದ್ಯಾರ್ಥಿನಿಯರು ಮಾನ ಮುಚ್ಚುವ ಪದ್ದತಿಯೆಂಬ ನೆಲೆಯಲ್ಲಿ ತಲೆಗೆ ತಮ್ಮ ಸಮವಸ್ತ್ರದ ಸೆರಗನ್ನು ಎಳೆದು ಕೊಳ್ಳವುದು ಇಸ್ಲಾಮ್ ಧರ್ಮದಲ್ಲಿ ಅತ್ಯಗತ್ಯವಾಗಿದೆ. ಇದು ಕುರ್ ಆನಿನ ಆದೇಶವೂ ಆಗಿದೆ. ಅದರೆ ಧರ್ಮದಲ್ಲಿರುವ ಇತರರಿಗೆ ತೊಂದರೆ ಕೊಡದ , ಇಂತಹ ಆಚಾರ ವಿಚಾರಗಳನ್ನು ಮುಂದಿಟ್ಟು ನ್ಯಾಯಾಲಯ ಮಧ್ಯೆ ಪ್ರವೇಶಿಸುವುದು ಉತ್ತಮ ಬೆಳವಣಿಗೆಯಲ್ಲ. ನ್ಯಾಯಕ್ಕಾಗಿ ಮುಂದಿನ ನಡೆಯ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಮಿತಿಯ ಅಧ್ಯಕ್ಷರಾದ ಎಸ್. ಬಿ. ಮುಹಮ್ಮದ್ ದಾರಿಮಿ ಹಾಗೂ ಕಾರ್ಯದರ್ಶಿ ರಶೀದ್ ರಹ್ಮಾನಿ ಪರ್ಲಡ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.