ಮಂಗಳೂರು: 2015ರ ನಾಸಿರ್ ಕೊಲೆ ಪ್ರಕರಣ ಆರೋಪಿಗಳ ಮೇಲಿನ ಆರೋಪವು ನ್ಯಾಯಾಲಯದಲ್ಲಿ ಸಾಬೀತಾಗಿದೆ. ಶಿಕ್ಷೆಯ ಪ್ರಮಾಣವನ್ನು ಎ.16ರಂದು ಪ್ರಕಟಿಸುವುದಾಗಿ ಕೋರ್ಟ್ ತಿಳಿಸಿದೆ.
2015ರ ಆ.6 ರಂದು ಮೊಹಮ್ಮದ್ ಮುಸ್ತಾಫ ಮತ್ತು ಮೊಹಮ್ಮದ್ ನಾಸೀರ್ ಮೆಲ್ಕಾರ್ ಕಡೆಯಿಂದ ಸಜಿಪದ ಕಡೆಗೆ ಆಟೋರಿಕ್ಷಾದಲ್ಲಿ ಹೋಗುತ್ತಿದ್ದಾಗ ವಿಜೇತ್ ಕುಮಾರ್, ಕಿರಣ್, ಅನೀಶ್ (ಧನು) ಮತ್ತು ಅಭಿ (ಅಭಿಜಿತ್) ಬೈಕ್ನಲ್ಲಿ ಬಂದು ರಾತ್ರಿ 10.45ಕ್ಕೆ ಸಜೀಪ ಮೂಡ ಗ್ರಾಮದ ಕೊಳಕೆ ಎಂಬಲ್ಲಿ ಆಟೋರಿಕ್ಷಾ ತಡೆದು ನಿಲ್ಲಿಸಿ ತಲವಾರಿನಿಂದ ಹಲ್ಲೆ ನಡೆಸಿದ್ದರು. ಇದರಿಂದ ಮೊಹಮ್ಮದ್ ಮುಸ್ತಾಫ ಮತ್ತು ನಾಸಿರ್ ಗಾಯಗೊಂಡು, ಚಿಕಿತ್ಸೆ ಫಲಕಾರಿಯಾಗದೆ ನಾಸೀರ್ ಮೃತಪಟ್ಟಿದ್ದರು.
ಕೊಲೆ ಪ್ರಕರಣದ ಬಗ್ಗೆ ಅಂದಿನ ಬಂಟ್ವಾಳ ಠಾಣಾ ಇನ್ಸ್ಪೆಕ್ಟರ್ ಕೆ.ಯು. ಬೆಳ್ಳಿಯಪ್ಪ ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. 29 ಸಾಕ್ಷಿದಾರರನ್ನು ವಿಚಾರಣೆ ನಡೆಸಿದ ನ್ಯಾಯಾಲಯ 40 ದಾಖಲೆಗಳನ್ನು ಗಣನೆಗೆ ತೆಗೆದುಕೊಂಡಿದೆ. 1ನೇ ಹೆಚ್ಚುವರಿ ದ.ಕ.ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಮಲ್ಲಿಕಾರ್ಜುನ ಎಚ್.ಎಸ್. ಅವರು ಆರೋಪಿಗಳು ದೋಷಿಗಳೆಂದು ಎ.8 ರಂದು ತೀರ್ಪು ನೀಡಿದ್ದಾರೆ. ಶಿಕ್ಷೆಯ ಪ್ರಮಾಣವನ್ನು ಎ.16ಕ್ಕೆ ನಿಗದಿಪಡಿಸಲಾಗಿದ್ದು, ಸರಕಾರಿ ಅಭಿಯೋಜಕರಾದ ಶೇಖರ ಶೆಟ್ಟಿ ವಿಚಾರಣೆ ನಡೆಸಿ ಜುಡಿತ್ ಓಲ್ಗಾ ಮಾರ್ಗರೇಟ್ ಕ್ರಾಸ್ತಾ ವಾದ ಮಂಡಿಸಿದ್ದರು.