ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣ | ಮೂವರು ಪ್ರಮುಖ ಆರೋಪಿಗಳಿಗೆ ಜೀವಾವಧಿ ಶಿಕ್ಷೆ

Prasthutha|

ರಾಜ್ಯದ ಜನತೆಯನ್ನು ಬೆಚ್ಚಿ ಬೀಳಿಸಿದ್ದ ಅನಿವಾಸಿ ಭಾರತೀಯ ಉದ್ಯಮಿ‌, ಉಡುಪಿ ಮೂಲದ ಭಾಸ್ಕರ್‌ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಪ್ರಮುಖ ಆರೋಪಿಗಳಿಗೆ ಉಡುಪಿಯ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಪ್ರಕಟಿಸಿದೆ.

ಮಂಗಳವಾರ ಬೆಳಗ್ಗೆ ಆರೋಪಿಗಳನ್ನು ನ್ಯಾಯಾಲಯ ದೋಷಿಗಳೆಂದು ತೀರ್ಪು ನೀಡಿತ್ತು. ಶಿಕ್ಷೆಯ ಪ್ರಮಾಣವನ್ನು ಮಧ್ಯಾಹ್ನ ಪ್ರಕಟಿಸುವುದಾಗಿ ನ್ಯಾಯಾಧೀಶ ಜೆ ಎನ್‌ ಸುಬ್ರಹ್ಮಣ್ಯ ತಿಳಿಸಿದ್ದರು. ಅದರಂತೆ ಉದ್ಯಮಿ ಪತ್ನಿ ರಾಜೇಶ್ವರಿ ಶೆಟ್ಟಿ, ಪುತ್ರ ನವನೀತ್‌ ಶೆಟ್ಟಿ ಹಾಗೂ ಜ್ಯೋತಿಷಿ ನಿರಂಜನ್‌ ಭಟ್‌ಗೆ ಜೀವಾವಧಿ ಶಿಕ್ಷೆ ನೀಡಲಾಗಿದೆ. ಸಾಕ್ಷ್ಯನಾಶ ಆರೋಪಿ ರಾಘವೇಂದ್ರನನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ.

- Advertisement -

2016ರ ಜುಲೈ 28ರಂದು ಉದ್ಯಮಿ ಇಂದ್ರಾಳಿಯ ಭಾಸ್ಕರ್‌ ಅವರನ್ನು ಭೀಕರವಾಗಿ ಕೊಲೆ ಮಾಡಿ ಶವವನ್ನು ಹೋಮಕುಂಡದಲ್ಲಿ ದಹಿಸಲಾಗಿತ್ತು. ಅವಶೇಷಗಳನ್ನು ಹತ್ತಿರದ ನದಿಗೆ ಎಸೆಯಲಾಗಿತ್ತು. ಅದೇ ತಿಂಗಳ 31ರಂದು ತಮ್ಮ ಮಗ ನಾಪತ್ತೆಯಾಗಿರುವ ಬಗ್ಗೆ ಭಾಸ್ಕರ್‌ ಅವರ ತಾಯಿ ಮಣಿಪಾಲ ಪೊಲೀಸ್‌ ಠಾಣೆಗೆ ದೂರು ಸಲ್ಲಿಸಿದ್ದರು. ತನಿಖೆ ನಡೆಸಿದ ಪೊಲೀಸರು ಆಗಸ್ಟ್ನಲ್ಲಿ ಆರೋಪಿಗಳನ್ನು ಬಂಧಿಸಿದ್ದರು.

ಕೆಲ ದಿನಗಳ ಬಳಿಕ ಆರೋಪಿ ರಾಜೇಶ್ವರಿ ಶೆಟ್ಟಿ ಅವರಿಗೆ ಜಾಮೀನು ದೊರೆತಿತ್ತು. ಮಗ ನವನೀತ್‌ ಶೆಟ್ಟಿ ಹಾಗೂ ನಂದಳಿಕೆಯ ಜ್ಯೋತಿಷಿ ನಿರಂಜನ್‌ ಭಟ್‌ ಸೆರೆವಾಸ ಅನುಭವಿಸುತ್ತಿದ್ದರು. ಸಾಕ್ಷ್ಯನಾಶ ಆರೋಪ ಎದುರಿಸುತ್ತಿದ್ದ ನಿರಂಜನ್‌ ಭಟ್‌ ತಂದೆ ಶ್ರೀನಿವಾಸ್‌ ಭಟ್‌ ಮೃತಪಟ್ಟಿದ್ದರು. ಮತ್ತೊಬ್ಬ ಆರೋಪಿ ರಾಘವೇಂದ್ರ ಅವರಿಗೆ ಜಾಮೀನು ಲಭಿಸಿತ್ತು.

ಪ್ರಾಸಿಕ್ಯೂಷನ್‌ ಪರವಾಗಿ ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್ ಶಾಂತಾರಮ ಶೆಟ್ಟಿ ವಾದ ಮಂಡಿಸಿದ್ದರು. ಮೇ 31ರಂದೇ ಪ್ರಕಟವಾಗಬೇಕಿದ್ದ ತೀರ್ಪನ್ನು ಕೋವಿಡ್‌ ಕಾರಣದಿಂದಾಗಿ ಜೂನ್‌ 8ಕ್ಕೆ ಮುಂದೂಡಿತ್ತು. ಆರೋಪಿಗಳಾದ ರಾಜೇಶ್ವರಿ ಶೆಟ್ಟಿ ಮತ್ತು ರಾಘವೇಂದ್ರ ನ್ಯಾಯಾಲಯದಲ್ಲಿ ಖುದ್ದು ಹಾಜರಿರಬೇಕು ಮತ್ತು ಉಳಿದ ಆರೋಪಿಗಳು ವೀಡಿಯೊ ಕಾನ್ಫರೆನ್ಸ್‌ ಮೂಲಕ ಹಾಜರಾಗುವಂತೆ ನ್ಯಾಯಾಲಯ ಸೂಚಿಸಿತ್ತು.

- Advertisement -