ನವದೆಹಲಿ: ಕುಟುಂಬವನ್ನು ಭೇಟಿ ಮಾಡಲು ಅವಕಾಶ ಮಾಡಿಕೊಡಬೇಕೆಂಬ ಉಮರ್ ಖಾಲಿದ್ ರ ಅರ್ಜಿಯನ್ನು ದೆಹಲಿ ಹೈಕೋರ್ಟ್ ತಿರಸ್ಕರಿಸಿದೆ.
ದೆಹಲಿ ಗಲಭೆಗೆ ಸಂಬಂಧಿಸಿ ಸೆಪ್ಟೆಂಬರ್ 13ಕ್ಕೆ ಉಮರ್ ಖಾಲಿದ್ ರನ್ನು ಪೊಲೀಸರು ಬಂಧಿಸಿದ್ದರು. ನಂತರ ಅವರನ್ನು ಹತ್ತು ದಿನಗಳ ಕಾಲ ಪೊಲೀಸ್ ಕಸ್ಟಡಿಯಲ್ಲಿ ಇರಿಸಲಾಗಿದೆ. ಎರಡು ದಿವಸಗಳಲ್ಲಿ ಅರ್ಧ ಗಂಟೆ ತನ್ನ ಕುಟುಂಬದ ಸದಸ್ಯರನ್ನು ನೋಡಲು ಅನುಮತಿ ಕೋರಿ ಉಮರ್ ಖಾಲಿದ್ ನ್ಯಾಯಾಲಯವನ್ನು ಸಂಪರ್ಕಿಸಿದ್ದರು. ತನ್ನ ಕುಟುಂಬ ಸದಸ್ಯರನ್ನು ನೋಡಲು ಅವಕಾಶ ನೀಡುವುದಾಗಿ ಪೊಲೀಸರು ಮೌಖಿಕ ಭರವಸೆ ನೀಡಿದ್ದರೂ ನಂತರ ಅನುಮತಿ ರದ್ದುಪಡಿಸಲಾಯಿತು ಎಂದು ಉಮರ್ ಪರ ಹಾಜರಾದ ವಕೀಲ ತ್ರಿದೀಪ್ ಪಯಸ್ ಹೇಳಿದ್ದಾರೆ.
ಕುಟುಂಬದ ಸದಸ್ಯರನ್ನು ಭೇಟಿಯಾಗುವುದು ವಿಚಾರಣೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ವಿಶೇಷ ಸರಕಾರಿ ಅಭಿಯೋಜಕ ನ್ಯಾಯಾಲಯಕ್ಕೆ ತಿಳಿಸಿದರು. ತನ್ನ ವಕೀಲರೊಂದಿಗೆ ನಿರಂತರ ಭೇಟಿಯಾಗುತ್ತಿರುವ ಉಮರ್, ಕುಟುಂಬದವರಿಗಾಗಿ ಏನಾದರೂ ಸಂದೇಶವಿದ್ದರೆ ತನ್ನ ವಕೀಲರ ಮೂಲಕ ಅದನ್ನು ತಿಳಿಸಬಹುದಾಗಿದೆ ಎಂದು ಅವರು ಕೋರ್ಟಿಗೆ ತಿಳಿಸಿದರು.