ತಿರುವನಂತಪುರಂ: UAPA ಕಾಯ್ದೆಯಡಿಯಲ್ಲಿ ಬಂಧಿತ ಕೇರಳದ ಪತ್ರಕರ್ತ ಸಿದ್ದೀಕ್ ಕಾಪ್ಪನ್ ಅವರಿಗೆ ಸುಪ್ರೀಮ್ ಕೋರ್ಟ್ ಜಾಮೀನು ನೀಡಿದ್ದು, ನನ್ನ ಗಂಡನ ನಿರಪರಾಧಿತ್ವವನ್ನು ನ್ಯಾಯಾಲಯ ಪತ್ತೆಹಚ್ಚಿದೆ ಎಂದು ಪತ್ನಿ ರೈಹಾನಾಥ್ ತಿಳಿಸಿದ್ದಾರೆ. ಅಲ್ಲದೆ ಸುಪ್ರೀಮ್ ಕೋರ್ಟ್’ನ ತೀರ್ಪನ್ನು ಅವರು ಶ್ಲಾಘಿಸಿದ್ದಾರೆ.
ಸಿದ್ದೀಕ್ ಕಾಪ್ಪನ್ ಅವರ ನಿರಪರಾಧಿತ್ವವನ್ನು ಪತ್ತೆಹಚ್ಚಿದ ಸರ್ವೋಚ್ಚ ನ್ಯಾಯಾಲಯವು, ಅವರಿಗೆ ಎರಡು ವರ್ಷಗಳ ಬಳಿಕ ಜಾಮೀನು ನೀಡಿದೆ. ಈ ಅವಧಿ ನಮಗೆ ತುಂಬಾ ಕಠಿಣವಾಗಿತ್ತು ಮತ್ತು ಹಲವು ರೀತಿಯಲ್ಲಿ ಸಂಕಷ್ಟಗಳನ್ನು ಎದುರಿಸುದ್ದೇವೆ ಎಂದು ರೈಹಾನಾಥ್ ತಿಳಿಸಿದ್ದಾರೆ.
ಹತ್ರಾಸ್ ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ವರದಿ ಮಾಡಲು ತೆರಳುತ್ತಿದ್ದಾಗ ಸಿದ್ದೀಕ್ ಕಾಪ್ಪನ್ ಅವರನ್ನು ಉತ್ತರ ಪ್ರದೇಶ ಪೊಲೀಸರು UAPA ಕಾಯ್ದೆಯಡಿಯಲ್ಲಿ 2020ರ ಅಕ್ಟೋಬರ್ 5 ರಂದು ಬಂಧಿಸಿತ್ತು. ಜಾಮೀನು ನಿರಾಕರಿಸುತ್ತಾ ಬರಲಾಗುತ್ತಿದ್ದು, ಎರಡು ವರ್ಷಗಳ ಬಳಿಕ ಸುಪ್ರೀಮ್ ಕೋರ್ಟ್ ಶುಕ್ರವಾರ ಜಾಮೀನು ನೀಡಿದೆ.
ಆರು ವಾರಗಳ ಕಾಲ ದೆಹಲಿ ಪೊಲೀಸರಿಗೆ ವರದಿ ಮಾಡಲು ಮತ್ತು ನಂತರ ಕೇರಳಕ್ಕೆ ಹೋಗಬಹುದು ಎಂದು ಪತ್ರಕರ್ತ ಸಿದ್ದೀಕ್ ಕಾಪ್ಪನ್ ಅವರಿಗೆ ಸುಪ್ರೀಮ್ ಕೋರ್ಟ್ ಸೂಚಿಸಿದೆ.
ಈ ಹಿಂದೆ ಅಲಹಾಬಾದ್ ಹೈಕೋರ್ಟ್’ನ ಲಕ್ನೋ ಪೀಠವು ಸಿದ್ದೀಕ್ ಕಾಪ್ಪನ್ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಅವರು ಸುಪ್ರೀಮ್ ಕೋರ್ಟ್ ಮೆಟ್ಟಿಲೇರಿದ್ದರು.