ಹೊಸದಿಲ್ಲಿ : ಕಳೆದ ಫೆಬ್ರವರಿಯಲ್ಲಿ ದೆಹಲಿಯಲ್ಲಿ ಮುಸ್ಲಿಂ ವಿರೋಧಿ ಗಲಭೆಗೆ ಸಂಚು ರೂಪಿಸಿದ ಆರೋಪದ ಮೇಲೆ ಬಿಜೆಪಿ ನಾಯಕ ಕಪಿಲ್ ಮಿಶ್ರಾ ಅವರ ತನಿಖೆಯ ಪ್ರಗತಿಯ ಬಗ್ಗೆ ವರದಿ ನೀಡುವಂತೆ ದೆಹಲಿ ನ್ಯಾಯಾಲಯ ಪೊಲೀಸರಿಗೆ ನಿರ್ದೇಶನ ನೀಡಿದೆ. ಸಾಮಾಜಿಕ ಕಾರ್ಯಕರ್ತ ಹರ್ಷ್ ಮಂದರ್ ನೀಡಿದ ದೂರಿನ ಮೇರೆಗೆ ಆಕ್ಷನ್ ಟೇಕನ್ ರಿಪೋರ್ಟ್ (ಎಟಿಆರ್) ಸಲ್ಲಿಸುವಂತೆ ನ್ಯಾಯಾಲಯ ಪೊಲೀಸರಿಗೆ ನಿರ್ದೇಶನ ನೀಡಿದೆ.
ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯಲ್ಲಿ ಕನಿಷ್ಠ 53 ಜನರು ಸಾವನ್ನಪ್ಪಿದ್ದರು. ನೂರಾರು ಜನರು ಗಾಯಗೊಂಡಿದ್ದರು. ಕೊಲ್ಲಲ್ಪಟ್ಟ ಮತ್ತು ಗಾಯಗೊಂಡವರಲ್ಲಿ ಹೆಚ್ಚಿನವರು ಮುಸ್ಲಿಮರಾಗಿದ್ದರು. ಹರ್ಷ್ ಮಂದರ್ ಕಳೆದ ವರ್ಷ ದೆಹಲಿ ಹೈಕೋರ್ಟ್‌ನಲ್ಲಿ ಕಪಿಲ್ ಮಿಶ್ರಾ ಪಾತ್ರದ ಬಗ್ಗೆ ತನಿಖೆ ನಡೆಸಬೇಕೆಂದು ಕೋರಿದ್ದರು. ಹೈಕೋರ್ಟ್‌ನ ನಿರ್ದೇಶನದಂತೆ ದೆಹಲಿ ಕೋರ್ಟ್ ಪೊಲೀಸರಿಂದ ವರದಿ ಕೋರಿದೆ. ಈ ವಿಷಯ ಪ್ರಸ್ತುತ ದೆಹಲಿ ಹೈಕೋರ್ಟ್ ಮುಂದೆ ಇದೆ.
ಮಾರ್ಚ್ 9 ರೊಳಗೆ ವರದಿ ಸಲ್ಲಿಸಬೇಕೆಂದು ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಹಿಮಾಂಶು ರಾಮನ್ ಸಿಂಗ್ ಆದೇಶ ಹೊರಡಿಸಿದ್ದಾರೆ. ಪೌರತ್ವ ಪ್ರತಿಭಟನಾಕಾರರ ವಿರುದ್ಧ ಗಲಭೆಗಳನ್ನು ಪ್ರಚೋದಿಸಿದ್ದಕ್ಕಾಗಿ ಮಿಶ್ರಾ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಮಂದರ್ ನೀಡಿದ ದೂರಿನಲ್ಲಿ ಉಲ್ಲೇಖಿಸಲಾಗಿತ್ತು.