ಮಂಗಳೂರಿನ ಲಾಡ್ಜ್ ನಲ್ಲಿ ದಂಪತಿಯ ಮೃತದೇಹ ಪತ್ತೆ

Prasthutha|

ಮಂಗಳೂರು: ಮಂಗಳೂರಿನ ಲಾಡ್ಜ್ ವೊಂದರಲ್ಲಿ ದಂಪತಿ ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಮೃತದೇಹಗಳು ಪತ್ತೆಯಾಗಿವೆ.

- Advertisement -


ಕೇರಳ ಮೂಲದ ರವೀಂದ್ರ (55) ಹಾಗೂ ಸುಧಾ (50) ಆತ್ಮಹತ್ಯೆಗೈದ ದಂಪತಿ ಎಂದು ತಿಳಿದುಬಂದಿದೆ. ಇವರು ಕೇರಳದ ತಳೀಪರಂಬು ನಿವಾಸಿ ಎಂದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ.
ಎರಡು ದಿನಗಳ ಹಿಂದೆ ದಂಪತಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಬಟ್ಟೆ ವ್ಯಾಪಾರಿಗಳಾದ ಈ ದಂಪತಿಯ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.


ನಗರದ ಫಳ್ನೀರ್’ನ ನ್ಯೂ ಬ್ಲೂಸ್ಟಾರ್ ಲಾಡ್ಜ್ ನಲ್ಲಿ ದಂಪತಿ ಫೆಬ್ರವರಿ 6ರಂದು ಕೊಠಡಿ ಪಡೆದಿದ್ದರು. ಎರಡು ದಿನಗಳಾದರೂ ಕೊಠಡಿಯಿಂದ ಯಾರು ಕೂಡ ಹೊರಬಾರದ ಹಿನ್ನೆಲೆಯಲ್ಲಿ ಸಂಶಯಗೊಂಡ ಲಾಡ್ಜ್ ಸಿಬ್ಬಂದಿ ಬುಧವಾರ ಬಾಗಿಲು ತೆರೆದು ನೋಡಿದಾಗ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.

- Advertisement -


ತಕ್ಷಣ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ, ಮೃತದೇಹಗಳನ್ನು ವೆನ್ ಲಾಕ್ ಆಸ್ಪತ್ರೆಗೆ ರವಾನಿಸಿದ್ದಾರೆ.
ಘಟನಾ ಸ್ಥಳಕ್ಕೆ ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್. ಶಶಿಕುಮಾರ್ ಭೇಟಿ, ಪರಿಶೀಲನೆ ನಡೆಸಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿದ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಸುದ್ದಿಗಾರರ ಜೊತೆ ಮಾತನಾಡಿ, ಬಂದರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಫಳ್ನೀರ್’ನ ನ್ಯೂ ಬ್ಲೂಸ್ಟಾರ್ ಲಾಡ್ಜ್ ಗೆ 6ರಂದು ಬೆಳಗ್ಗೆ 11 ಗಂಟೆಗೆ ರವೀಂದ್ರ, ಸುಧಾ ದಂಪತಿ ಬಂದಿದ್ದಾರೆ. ಆಧಾರ್ ಕಾರ್ಡ್ ಮತ್ತು ಇತರ ದಾಖಲೆಗಳನ್ನು ನೀಡಿ ಕೊಠಡಿ ಪಡೆದಿದ್ದಾರೆ. 6ರಂದು ರಾತ್ರಿ ಕೊನೆಯ ಬಾರಿಗೆ ಅವರು ಕೊಠಡಿಯಲ್ಲಿದ್ದುದನ್ನು ಲಾಡ್ಜ್ ನ ಸಿಬ್ಬಂದಿ ನೋಡಿದ್ದಾರೆ. ಆದರೆ ಅದಾದ ಬಳಿಕ ಅವರು ಕೊಠಡಿಯಿಂದ ಹೊರಬಂದಿಲ್ಲ. ಇಂದು ಬೆಳಗ್ಗೆ ಈ ಬಗ್ಗೆ ಲಾಡ್ಜ್ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಪೊಲೀಸರು ಬಂದು ಬಾಗಿಲು ಒಡೆದು ನೋಡಿದಾಗ ಫ್ಯಾನಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಇಬ್ಬರ ಶವ ಪತ್ತೆಯಾಗಿದೆ ಎಂದು ತಿಳಿಸಿದರು.

ಅವರ ಕುಟುಂಬದ ಸದಸ್ಯರಿಗೆ ಮಾಹಿತಿ ನೀಡಲಾಗಿದೆ. ಕುಟುಂಬ ಸದಸ್ಯರು ಬಂದ ಮೇಲೆ ಮುಂದಿನ ಪ್ರಕ್ರಿಯೆ ನಡೆಸಲಾಗುವುದು. ಬಟ್ಟೆ ವ್ಯಾಪಾರಿಯಾಗಿದ್ದ ಅವರು ಇಲ್ಲಿಗೆ ಯಾವ ಕಾರಣಕ್ಕೆ ಬಂದಿದ್ದರು  ಎಂಬುದು ತನಿಖೆಯಿಂದಷ್ಟೇ ತಿಳಿಯಬೇಕಿದೆ ಎಂದು ಶಶಿಕುಮಾರ್ ತಿಳಿಸಿದರು.