ನವದೆಹಲಿ: ಸಿಬಿಎಸ್ ಇ, ಐಸಿಎಸ್ ಇ ಹಾಗೂ ದೇಶದ ಎಲ್ಲಾ ಶಿಕ್ಷಣ ಮಂಡಳಿಗಳಿಗೆ ಮಾತೃಭಾಷೆಯಲ್ಲಿ ಸಾಮಾನ್ಯ ಪಠ್ಯಕ್ರಮವನ್ನು ಜಾರಿಗೆ ತರಲು ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಲಾದ ಅರ್ಜಿಗೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ಕೇಂದ್ರದ ಪ್ರತಿಕ್ರಿಯೆ ಕೇಳಿದೆ.
ಸಿಬಿಎಸ್ ಇ, ಐಸಿಎಸ್ ಇ ಮತ್ತು ರಾಜ್ಯ ಮಂಡಳಿಗಳ ವಿಭಿನ್ನ ಪಠ್ಯಕ್ರಮಗಳು ಮನಸೋಇಚ್ಛೆಯಿಂದ ಕೂಡಿದ್ದು ಸಂವಿಧಾನದ 14, 15, 16, 21 ಮತ್ತಿತರ ನಿಬಂಧನೆಗಳಿಗೆ ವಿರುದ್ಧ ಎಂದು ಬಿಜೆಪಿ ನಾಯಕ ಮತ್ತು ವಕೀಲ ಅಶ್ವಿನಿ ಉಪಾಧ್ಯಾಯ ಸಲ್ಲಿಸಿದ ಪಿಐಎಲ್ನಲ್ಲಿ ತಿಳಿಸಲಾಗಿದೆ.
ಜೆಇಇ, ನೀಟ್, ಎನ್ ಡಿಎ, ಸಿಎಲ್ ಎಟಿ ಮುಂತಾದ ಎಲ್ಲ ಪ್ರವೇಶ ಪರೀಕ್ಷೆಗಳಿಗೆ ಪಠ್ಯಕ್ರಮವು ಏಕರೂಪವಾಗಿದೆ. ವಿಪರ್ಯಾಸವೆಂದರೆ, ಸಿಬಿಎಸ್ ಸಿ, ಐಸಿಎಸ್ ಇ ಮತ್ತು ರಾಜ್ಯ ಶಿಕ್ಷಣ ಮಂಡಳಿಗಳ ಪಠ್ಯಕ್ರಮವು ಸಂಪೂರ್ಣವಾಗಿ ವಿಭಿನ್ನವಾಗಿವೆ. ಇದು ವಿದ್ಯಾರ್ಥಿಗಳನ್ನು ಸಮಾನ ಅವಕಾಶಗಳಿಂದ ವಿಮುಖವಾಗಿಸುತ್ತದೆ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ.
ಶಿಕ್ಷಣ ಸಚಿವಾಲಯ, ಕಾನೂನು ಮತ್ತು ನ್ಯಾಯ ಸಚಿವಾಲಯ, ಸಾಮಾಜಿಕ ನ್ಯಾಯ ಸಚಿವಾಲಯ, ದೆಹಲಿ ಸರ್ಕಾರ, ಸಿಬಿಎಸ್ ಇ ಮತ್ತು ಸಿಐಎಸ್ ಸಿಇ ಈ ಸಂಬಂಧ ಆರು ವಾರದೊಳಗೆ ಪ್ರತಿಕ್ರಿಯೆ ಸಲ್ಲಿಸಬೇಕು ಎಂದು ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿಪಿನ್ ಸಾಂಘಿ ಮತ್ತು ನ್ಯಾಯಮೂರ್ತಿ ನವೀನ್ ಚಾವ್ಲಾ ಅವರಿದ್ದ ಪೀಠ ತಿಳಿಸಿದೆ. ಆಗಸ್ಟ್ 30 ರಂದು ಪ್ರಕರಣದ ವಿಚಾರಣೆ ನಡೆಯಲಿದೆ.