ಬೆಂಗಳೂರು: ಕರ್ನಾಟಕದ ವಿಧಾನಸಭೆಯ 224 ಕ್ಷೇತ್ರಗಳಿಗೆ ನಡೆದಿದ್ದ ಚುನಾವಣೆಯ ಮತಗಳ ಎಣಿಕೆಗೆ ಕ್ಷಣಗಣನೆ ಆರಂಭವಾಗಿದ್ದು, ಕೆಲವೇ ಹೊತ್ತಲ್ಲಿ ಘಟಾನುಘಟಿ ರಾಜಕೀಯ ನಾಯಕರ ಭವಿಷ್ಯ ಬಯಲಾಗಲಿದೆ. ಬಹು ನಿರೀಕ್ಷಿತ ಮತ ಎಣಿಕೆ ಬೆಳಗ್ಗೆ 8 ಗಂಟೆಯಿಂದಲೇ ಆರಂಭವಾಗಲಿದೆ.
ಮೇ 10ರಂದು ನಡೆದಿದ್ದ ಒಂದೇ ಹಂತದಲ್ಲಿ ಮತದಾನದಲ್ಲಿ 5,30,85,566 ಮತದಾರರ ಪೈಕಿ 3,88,51,807 ಜನರು ಮತದಾನ ಮಾಡಿದ್ದರು. ರಾಜ್ಯದಲ್ಲಿ ಈ ಬಾರಿ ದಾಖಲೆ ಪ್ರಮಾಣದಲ್ಲಿ ಶೇ. 73.19ರಷ್ಟು ಮತ ಚಲಾವಣೆಯಾಗಿದೆ. ಕರ್ನಾಟಕದ 224 ಕ್ಷೇತ್ರಗಳಲ್ಲಿ ರಾಜ್ಯದ ಮತದಾರರು ಬರೆದಿರುವ 2615 ಅಭ್ಯರ್ಥಿಗಳ ಹಣೆಬರಹ ಈಗಾಗಲೇ ವಿದ್ಯುನ್ಮಾನ ಮತಯಂತ್ರಗಳಲ್ಲಿ ಭದ್ರವಾಗಿದೆ.
ಇನ್ನು ಕೆಲವೇ ಹೊತ್ತಲ್ಲಿ ಅವರೆಲ್ಲರ ಹಣೆಬರಹ ನಿರ್ಧಾರವಾಗಲಿದೆ. ಬೆಳಗ್ಗೆ 8 ಗಂಟೆ ವೇಳೆಗೆ ಮತಗಳ ಎಣಿಕೆ ಪ್ರಕ್ರಿಯೆಗೆ ಚಾಲನೆ ದೊರೆಯಲಿದ್ದು, ಮೊದಲಿಗೆ ಅಂಚೆ ಮತಗಳ ಎಣಿಕೆ ಶುರುವಾಗಲಿದೆ. ನಂತರ ಇವಿಎಂ ಯಂತ್ರಗಳಲ್ಲಿನ ಮತಗಳ ಎಣಿಕೆ ಆರಂಭವಾಗಲಿದೆ.