ಬೆಂಗಳೂರು: ನೂತನವಾಗಿ ಆಯ್ಕೆಯಾಗಿರುವ ಕಾಂಗ್ರೆಸ್ ಶಾಸಕರ (ಸಿಎಲ್‌ಪಿ) ಸಭೆಗೆ ಕ್ಷಣಗಣನೆ ಆರಂಭವಾಗಿದ್ದು, ಇಂದು(ಭಾನುವಾರ) ಸಂಜೆ 5.30ಕ್ಕೆ ಸಭೆ ನಡೆಯಲಿದೆ.
ಸಿಎಲ್‌ಪಿ ಸಭೆಯಲ್ಲಿ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ನಡೆಯಲಿದೆ. ಆಯ್ಕೆಯಾದ ನಾಯಕ ನೂತನ ಮುಖ್ಯಮಂತ್ರಿಯಾಗಿ ಸೋಮವಾರ (ಮೇ 15) ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಜೊತೆಗೆ, ಅಂದೇ ನೂತನ ಸಚಿವರ ಪ್ರಮಾಣವಚನವೂ ನಡೆಯುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಶಾಸಕಾಂಗ ಪಕ್ಷದ ನಾಯಕನಾಗಿ ಸಿದ್ದರಾಮಯ್ಯ ಆಯ್ಕೆಯಾಗುವ ಸಾಧ್ಯತೆ ಇದ್ದು, ಮೂರು ಉಪ ಮುಖ್ಯಮಂತ್ರಿ ಹುದ್ದೆಯನ್ನು ಸೃಷ್ಟಿಸಿ, ಲಿಂಗಾಯತ ಸಮುದಾಯದ ಎಂ.ಬಿ. ಪಾಟೀಲ, ದಲಿತ ಸಮುದಾಯದ ಜಿ. ಪರಮೇಶ್ವರ ಅಥವಾ ಕೆ.ಎಚ್. ಮುನಿಯಪ್ಪ, ಒಕ್ಕಲಿಗ ಸಮುದಾಯದಿಂದ ಡಿ.ಕೆ. ಶಿವಕುಮಾರ್ ಅವರಿಗೆ ನೀಡುವ ಬಗ್ಗೆಯೂ ಚರ್ಚೆ ನಡೆದಿದೆ. ದಲಿತ ಸಮುದಾಯದಿಂದ ಪರಮೇಶ್ವರ ಅವರಿಗೆ ಉಪ ಮುಖ್ಯಮಂತ್ರಿ ನೀಡಲು ವರಿಷ್ಠರು ಒಲವು ಹೊಂದಿದ್ದಾರೆ ಎನ್ನಲಾಗಿದೆ.