ಬೆಂಗಳೂರು; ರಾಜ್ಯದ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ 25 ಸ್ಥಾನಗಳಿಗೆ ನಡೆದಿದ್ದ ಚುನಾವಣೆಯ ಮತ ಎಣಿಕೆ ಆರಂಭವಾಗಿದೆ. ಮೂರು ಸ್ಥಾನಗಳ ಫಲಿತಾಂಶ ಘೋಷಣೆಯಾಗಿದ್ದು ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ತಲಾ ಒಂದೊಂದು ಸ್ಥಾನಗಳಲ್ಲಿ ಗೆಲುವು ಸಾಧಿಸಿವೆ.
ಕೊಡಗಿನಲ್ಲಿ ಬಿಜೆಪಿ ಅಭ್ಯರ್ಥಿ ಸುಜಾ ಕುಶಾಲಪ್ಪ ಕಾಂಗ್ರೆಸ್ ಅಭ್ಯರ್ಥಿ ಎದುರು ಜಯ ಸಾಧಿಸಿದ್ದಾರೆ. ಹಾಸನದಲ್ಲಿ ಜೆಡಿಎಸ್ ಅಭ್ಯರ್ಥಿ ಸೂರಜ್ ರೇವಣ್ಣ ಗೆಲುವಿನ ನಗೆ ಬೀರಿದ್ದಾರೆ. ಬೀದರ್ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಭೀಮರಾವ್ ಬಿ. ವಿಜಯ ಮಾಲೆ ಹಾಕೊಂಡಿದ್ದಾರೆ. ಅವರು ಬಿಜೆಪಿ ಎದುರು ಜಯಗಳಿಸಿದ್ದಾರೆ.
ಕರ್ನಾಟಕ ವಿಧಾನ ಪರಿಷತ್ ನ ಒಟ್ಟು ಸದಸ್ಯರ ಸಂಖ್ಯೆ 75 . ಪರಿಷತ್ತಿನ ಒಟ್ಟು ಸದಸ್ಯರಲ್ಲಿ ಮೂರನೇ ಒಂದರಷ್ಟು ಸದಸ್ಯರನ್ನು ಇತರ ಸ್ಥಳೀಯ ಸಂಸ್ಥೆಗಳಾದ ನಗರಸಭೆ, ಪುರಸಭೆ, ಗ್ರಾಮ ಸಭೆ, ಗ್ರಾಮ ಪಂಚಾಯಿತಿ, ಪಂಚಾಯಿತಿ ಸಮಿತಿಗಳು ಹಾಗು ಜಿಲ್ಲಾ ಪರಿಷತ್ತುಗಳ ಸದಸ್ಯರು ಆಯ್ಕೆ ಮಾಡುತ್ತಾರೆ.
ಇನ್ನು ಮೂರನೇ ಒಂದರಷ್ಟು ಸದಸ್ಯರನ್ನು ವಿಧಾನ ಸಭಾ ಸದಸ್ಯರು ಆಯ್ಕೆ ಮಾಡುತ್ತಾರೆ. ಪರಿಷತ್ ನ ಒಟ್ಟು ಸದಸ್ಯರಲ್ಲಿ ಆರನೇ ಒಂದರಷ್ಟು ಸದಸ್ಯರು ರಾಜ್ಯಪಾಲರಿಂದ ನೇರವಾಗಿ ನೇಮಕವಾಗುತ್ತಾರೆ. ಸಾಹಿತ್ಯ, ವಿಜ್ಞಾನ, ಕಲೆ, ಸಮಾಜ ಸೇವೆ ಮತ್ತಿತರ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ರಾಜ್ಯಪಾಲರು ವಿಧಾನ ಪರಿಷತ್ ಸದಸ್ಯರನ್ನಾಗಿ ನೇಮಕ ಮಾಡುತ್ತಾರೆ.
ನಮ್ಮ ಯೂಟ್ಯೂಬ್ ಚಾನೆಲನ್ನು Subscribe ಮಾಡಿ : Prasthutha News