Home ಟಾಪ್ ಸುದ್ದಿಗಳು ಕಾಟನ್​ ಕ್ಯಾಂಡಿ (ಬಾಂಬೆ ಮಿಠಾಯಿ) ತಮಿಳುನಾಡಿನಲ್ಲೂ ಬ್ಯಾನ್

ಕಾಟನ್​ ಕ್ಯಾಂಡಿ (ಬಾಂಬೆ ಮಿಠಾಯಿ) ತಮಿಳುನಾಡಿನಲ್ಲೂ ಬ್ಯಾನ್

ಇದನ್ನು ತಿಂದರೆ ಕ್ಯಾನ್ಸರ್ ಸಾಧ್ಯತೆ!

ತಮಿಳುನಾಡು: ಮಕ್ಕಳ ಇಷ್ಟವಾದ ಬಾಂಬೆ ಮಿಠಾಯಿಯನ್ನು ಪುದುಚ್ಚೇರಿ ಬಳಿಕ ತಮಿಳುನಾಡಿನಲ್ಲೂ ಸಂಪೂರ್ಣವಾಗಿ ನಿಷೇಧ ಮಾಡಲಾಗಿದೆ. ಬಾಂಬೆ ಮಿಠಾಯಿಯನ್ನು ನಾಲಿಗೆ ರುಚಿ ಎಂದುಕೊಂಡು ಸವಿದರೆ ಕ್ಯಾನ್ಸರ್ ರೋಗವನ್ನು ಸ್ವಾಗತಿಸಿದಂತೆಯೇ ಸರಿ ಎಂದು ಸಂಶೋಧನೆಗಳು ಹೇಳಿದ್ದರ ಪರಿಣಾಮ ಅದು ತಮಿಳುನಾಡಿಲ್ಲಿಯೂ ಬ್ಯಾನ್‌ಗೆ ಒಳಗಾಗಿದೆ.

ಮಿಠಾಯಿ ತಯಾರಿಕೆಗೆ ಆರೋಗ್ಯಕ್ಕೆ ಹಾನಿಕಾರಕವಾದ ರೋಡಮೈನ್-ಬಿ ರಾಸಾಯನಿಕ ಬಳಸುತ್ತಿರುವುದು ಕಂಡುಬಂದ ಹಿನ್ನೆಲೆಯಲ್ಲಿ ತಮಿಳುನಾಡು ಸರ್ಕಾರ ರಾಜ್ಯದಲ್ಲಿ ಇದರ ಮಾರಾಟ ಮತ್ತು ತಯಾರಿಕೆಯನ್ನು ನಿಷೇಧಿಸಿದೆ.

ಆಹಾರ ಸುರಕ್ಷತಾ ಇಲಾಖೆಯು ಕಾಟನ್​ ಕ್ಯಾಂಡಿಯ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಿದ್ದು, ಅದರಲ್ಲಿ ‘ಕ್ಯಾನ್ಸರ್ ಉಂಟು ಮಾಡುವ’ ರೋಡಮೈನ್-ಬಿ ಇರುವಿಕೆಯನ್ನು ಪತ್ತೆ ಹಚ್ಚಲಾಗಿದೆ ಎಂದು ತಮಿಳುನಾಡು ಆರೋಗ್ಯ ಸಚಿವ ಮಾ ಸುಬ್ರಮಣಿಯನ್ ಹೇಳಿದ್ದಾರೆ.

ಆಹಾರ ಸುರಕ್ಷತಾ ಗುಣಮಟ್ಟ ಕಾಯಿದೆ, 2006 ರ ಪ್ರಕಾರ ಮದುವೆ ಸಮಾರಂಭಗಳು ಮತ್ತು ಇತರ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ರೋಡಮೈನ್-ಬಿ ಹೊಂದಿರುವ ಆಹಾರ ಪದಾರ್ಥಗಳನ್ನು ತಯಾರಿಸುವುದು, ಪ್ಯಾಕೇಜಿಂಗ್ ಮಾಡುವುದು, ಆಮದು ಮಾಡಿಕೊಳ್ಳುವುದು, ಮಾರಾಟ ಮಾಡುವುದು ಮತ್ತು ಬಡಿಸುವುದು ಶಿಕ್ಷಾರ್ಹ ಅಪರಾಧವಾಗಿದೆ ಎಂದು ಸಚಿವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಪರಿಶೀಲಿಸಿ ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆಯೂ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಫೆಬ್ರವರಿ 9 ರಂದು ಪುದುಚೇರಿ ಬಾಂಬೆ ಮಿಠಾಯಿಯ ಮಾರಾಟವನ್ನು ನಿಷೇಧಿಸಿತ್ತು. ಅದಾದ ಕೆಲವೇ ದಿನಗಳಲ್ಲಿ ತಮಿಳುನಾಡಿನಲ್ಲಿಯೂ ಇದರ ನಿಷೇಧ ಮಾಡಲಾಗಿದೆ.

Join Whatsapp
Exit mobile version