Home ಟಾಪ್ ಸುದ್ದಿಗಳು ಪಶು ಸಂಗೋಪನಾ ಇಲಾಖೆಯಲ್ಲಿ ಭ್ರಷ್ಟಾಚಾರ: ತನಿಖೆಯ ಭರವಸೆ ನೀಡಿದ ಸಚಿವ ಪ್ರಭು ಚವ್ಹಾಣ್

ಪಶು ಸಂಗೋಪನಾ ಇಲಾಖೆಯಲ್ಲಿ ಭ್ರಷ್ಟಾಚಾರ: ತನಿಖೆಯ ಭರವಸೆ ನೀಡಿದ ಸಚಿವ ಪ್ರಭು ಚವ್ಹಾಣ್

ಬೆಂಗಳೂರು: ಪಶು ಸಂಗೋಪನಾ ಇಲಾಖೆಯಲ್ಲಿ ಔಷಧಿ ಖರೀದಿಯಲ್ಲಿ ನಡೆದಿರುವ ಭ್ರಷ್ಟಾಚಾರವನ್ನು ತನಿಖೆಗೆ ಒಳಪಡಿಸುವುದಾಗಿ ಪಶುಸಂಗೋಪನಾ ಸಚಿವ ಪ್ರಭುಚವ್ಹಾಣ್ ಭರವಸೆ ನೀಡಿದ್ದಾರೆ. ವಿಧಾನ ಪರಿಷತ್ ನಲ್ಲಿ ಪ್ರಶ್ನೋತ್ತರದಲ್ಲಿ ಕಾಂಗ್ರೆಸ್ ಸದಸ್ಯ ಡಾ,ಕೆ.ಗೋವಿಂದರಾಜು, ಔಷಧಿ ಕಳಪೆಯಿಂದ ಜಾನುವಾರುಗಳು ಸಾಯುತ್ತಿವೆ. ರೈತರು ನಷ್ಟ ಅನುಭವಿಸುತ್ತಿದ್ದಾರೆ. ಔಷಧಿ ಖರೀರಿಯಲ್ಲಿ ಅವ್ಯವಹಾರ ನಡೆಯುತ್ತಿದೆ. ಇದನ್ನು ಸದನ ಸಮಿತಿ, ಎಸ್ ಐ ಟಿ, ಸಿಐಡಿ ಅಥವಾ ಎಸಿಬಿ ತನಿಖೆಗೆ ಒಳಪಡಿಸಿ ಎಂದು ಒತ್ತಾಯಿಸಿದರು. ಇದಕ್ಕೆ ಸದಸ್ಯ ಬೋಜೆಗೌಡ ಕೂಡ ಧ್ವನಿಗೂಡಿಸಿದರು.


ಉತ್ತರ ನೀಡಿದ ಸಚಿವರು, ಆಯುಕ್ತರ ಮಟ್ಟದಲ್ಲಿ ರಾಜ್ಯಮಟ್ಟದಿಂದ ಜಿಲ್ಲಾ ಮಟ್ಟದವರೆಗೂ ಇ-ಟೆಂಡರ್ ಮೂಲಕ ಔಷಧಿ ಖರೀದಿ ಮಾಡಲಾಗುತ್ತಿದೆ. ತಾಂತ್ರಿಕ ಸಮಿತಿ ಶಿಫಾರಸ್ಸು ಮೇರೆಗೆ ಅಗತ್ಯ ಇರುವ ಔಷಧಿಗಳನ್ನು ಖರೀದಿಸಲಾಗುತ್ತಿದೆ. ಎಲ್ 1 ಇರುವವರಿಗೆ ಟೆಂಡರ್ ನೀಡುತ್ತಿದ್ದೇವೆ. ಇದರಲ್ಲಿ ಯಾವುದೇ ಅವ್ಯವಾರ ನಡೆದಿಲ್ಲ ಎಂದು ಸಮರ್ಥಿಸಿಕೊಂಡರು.


ನಮ್ಮ ಸರ್ಕಾರ ಔಷಧಿ ಖರೀದಿಯಲ್ಲಿ ಪಾರದರ್ಶಕತೆ ತರಲಾಗಿದೆ ಎಂದಾಗ ಸದಸ್ಯರು ತನಿಖೆಗೆ ಒತ್ತಾಯಿಸಿದರು. ಸಭಾಪತಿ ಅವರು ಮಧ್ಯ ಪ್ರವೇಶಿ ಮಾಡಿ ತನಿಖೆ ಮಾಡಿಸಿ ಎಂದಾಗ ಸಚಿವರು ಅದಕ್ಕೆ ಸಹಮತ ವ್ಯಕ್ತ ಪಡಿಸಿದರು. ಸಲೀಂ ಅಹಮದ್ ಪರವಾಗಿ ಪ್ರಕಾಶ್ ರಾಥೋಡ್ ಪ್ರಶ್ನೆ ಕೇಳಿ, ಪಶು ವೈದ್ಯಕೀಯ ಇಲಾಖೆಯಲ್ಲಿ ವೈದ್ಯರ ಹುದ್ದೆಗಳ ಕೊರತೆಯ ಬಗ್ಗೆ ಕೇಳಿದಾಗ ಈಗಾಗಲೇ 400ಕ್ಕೂ ಹೆಚ್ಚು ಹುದ್ದೆಗಳ ನೇಮಕಕ್ಕೆ ಅಧಿಸೂಚನೆ ಹೊರಡಿಸಲಾಗಿದೆ. ನೇಮಕವಾದವರನ್ನು ಖಾಲಿ ಇರುವ ಕಡೆಗೆ ಆದ್ಯತೆ ಮೇರೆ ನಿಯೋಜನೆ ಮಾಡಿಕೊಡುವುದಾಗಿ ಭರವಸೆ ನೀಡಿದರು.


ಪ್ರಶ್ನೋತ್ತರದ ವೇಳೆ ಸದಸ್ಯರು ಗಂಭೀರ ವಿಚಾರ ವಿಷಯ ಚರ್ಚೆ ಮಾಡುತ್ತಿದ್ದರೆ, ಸಚಿವರು ನಗುತ್ತಾ ಕಾಲ ಕಳೆಯುತ್ತಿದ್ದಾರೆ. ಇಲಾಖೆಯಲ್ಲಿ ಹಲವು ಹಗರಣಗಳಿವೆ, ಇದನ್ನು ಸದನ ಸಮಿತಿಯ ತನಿಖೆಗೆ ಒಳಪಡಿಸಿ ಎಂದು ಸದಸ್ಯ ಗೋವಿಂದ ರಾಜು ಒತ್ತಾಯಿಸಿದಾಗ, ಪ್ರತಿಕ್ರಿಯಿಸಿದ ಸಚಿವ ಪ್ರಭು ಚವ್ಹಾಣ್, ನಾನು ಗಂಭೀರವಾಗಿದ್ದೇನೆ. ನಗುತ್ತಿಲ್ಲ. ಸದಸ್ಯರ ಬೇಡಿಕೆ ಮೇರೆಗೆ ಇಲಾಖಾ ಮಟ್ಟದಲ್ಲಿ ತನಿಖೆ ಮಾಡಿಸುತ್ತೇನೆ ಎಂದು ಸ್ಪಷ್ಟನೆ ನೀಡಿದರು.

Join Whatsapp
Exit mobile version