Home ಕರಾವಳಿ ಮುಲ್ಕಿ | ಪ್ರಸಿದ್ಧ ಬಪ್ಪನಾಡು ಜಾತ್ರೆಯಲ್ಲೂ ಮುಸ್ಲಿಮರ ವ್ಯಾಪಾರಕ್ಕಿಲ್ಲ ಅವಕಾಶ!

ಮುಲ್ಕಿ | ಪ್ರಸಿದ್ಧ ಬಪ್ಪನಾಡು ಜಾತ್ರೆಯಲ್ಲೂ ಮುಸ್ಲಿಮರ ವ್ಯಾಪಾರಕ್ಕಿಲ್ಲ ಅವಕಾಶ!

ಮುಲ್ಕಿ: ವ್ಯಾಪಾರದಲ್ಲೂ ಧರ್ಮ ಹುಡುಕುವ ನೀಚ ಕೆಲಸ ಪ್ರಸ್ತುತ ಕರಾವಳಿಯ ಧಾರ್ಮಿಕ ಕ್ಷೇತ್ರಗಳಲ್ಲಿ ಹೆಚ್ಚಾಗಿದೆ. ಹಿಂದೂ-ಮುಸ್ಲಿಮರು ಒಟ್ಟಾಗಿ ವ್ಯಾಪಾರ ನಡೆಸುವ ಜಾತ್ರೆ, ಕೋಲ, ನೇಮಗಳ ವ್ಯಾಪಾರ ವಹಿವಾಟುಗಳಿಗೂ ಧರ್ಮದ ವ್ಯಾಖ್ಯಾನ ಬರೆಯುವುದರ ಬಗ್ಗೆ ಸಾರ್ವಜನಿಕ ವಲಯಗಳಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗುತ್ತಿದೆ.


ಅದರಂತೆಯೇ ಮುಲ್ಕಿಯ ಪ್ರಸಿದ್ಧ ಬಪ್ಪನಾಡು ಶ್ರೀ ದುರ್ಗಾ ಪರಮೇಶ್ವರಿ ಸನ್ನಿಧಿಯಲ್ಲಿ ನಡೆಸಲ್ಪಡುವ ಬಪ್ಪನಾಡು ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ಈ ಬಾರಿ ಮುಸ್ಲಿಮರ ವ್ಯಾಪಾರ ವಹಿವಾಟುಗಳಿಗೆ ನಿಷೇಧ ಹೇರಲಾಗಿದೆ ಎನ್ನಲಾಗಿದೆ. ಈ ಕುರಿತು ಸಮಸ್ತ ಹಿಂದೂ ಬಾಂಧವರು ಎನ್ನುವ ಹೆಸರಿನ ಬ್ಯಾನರ್ ಒಂದನ್ನು ಮುಲ್ಕಿ ಪೇಟೆ ಮತ್ತು ಕಾರ್ನಾಡು ಬಸ್ ನಿಲ್ದಣದ ಬಳಿ ಅಳವಡಿಸಲಾಗಿದ್ದು, ಹಿಂದೂ ಜಾಗೃತನಾಗಿದ್ದಾನೆ ಎಂದು ಬರೆಯಲಾಗಿದೆ!.


ಅಳವಡಿಸಲಾದ ಬ್ಯಾನರ್ ನಲ್ಲಿ “ಈ ನೆಲದ ಸಂವಿಧಾನ ಮತ್ತು ಕಾನೂನುಗಳನ್ನು ಗೌರವಿಸದ ನಾವು ಪೂಜಿಸುವ ಗೋವುಗಳನ್ನು ಅಮಾನುಷವಾಗಿ ಕಡಿದು ಕೊಲ್ಲುವ ಈ ದೇಶದ ಅಖಂಡತೆಗೆ ಸವಾಲು ಎಸೆಯುವ ಮತಾಂಧರು ಹಾಗೂ ಗೋ ಕಟುಕರ ಜೊತೆಗೆ ನಾವು ನಮ್ಮ ಆರಾಧ್ಯ ದೇವಿಯಾದ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವರ ಜಾತ್ರೆಯಲ್ಲಿ ವ್ಯಾಪಾರ ವಹಿವಾಟುಗಳನ್ನು ನಡೆಸುವುದಿಲ್ಲ ಹಾಗೂ ವ್ಯಾಪಾರ ನಡೆಸಲು ಅವಕಾಶ ನೀಡುವುದಿಲ್ಲ” ಎಂದು ಬರೆಯಲಾಗಿದೆ.


ಬಪ್ಪನಾಡಿನ ಜಾತ್ರಾ ಮಹೋತ್ಸವದಲ್ಲಿ ಇಷ್ಟು ವರ್ಷಗಳ ಕಾಲ ಪರಸ್ಪರ ಸಹೋದರತೆಯಿಂದ ಹಿಂದು-ಮುಸ್ಲಿಮರು ಒಟ್ಟಾಗಿ ನಡೆಸುತ್ತಿದ್ದ ವ್ಯಾಪಾರಕ್ಕೆ ನಿರ್ದಿಷ್ಟ ಸಮುದಾಯದ ಜನರಿಗೆ ನಿರ್ಬಂಧ ಹೇರಿದ್ದು ಅನೇಕರ ಆಕ್ರೋಶಕ್ಕೂ ಕಾರಣವಾಗಿದೆ. ಆದರೆ ನಿಷೇಧ ಹೇರಿಕೆ ಬಗ್ಗೆ ಈವರೆಗೂ ಬಪ್ಪನಾಡು ದೇವಸ್ಥಾನ ಆಡಳಿತ ಮಂಡಳಿಯು ಸೃಷ್ಟೀಕರಣ ನೀಡದೆ ಮೌನ ವಹಿಸಿದ್ದು ಕುತೂಹಲ ಮೂಡಿಸಿದೆ.

Join Whatsapp
Exit mobile version