ಬೆಂಗಳೂರು: ಮತಾಂತರ ವಿರೋಧಿ ಮಸೂದೆ (ಧಾರ್ಮಿಕ ಹಕ್ಕು ರಕ್ಷಣೆ ಮಸೂದೆ 2021)ಯನ್ನು ಕರ್ನಾಟಕ ವಿಧಾನ ಪರಿಷತ್‌ನಲ್ಲಿ ಗುರುವಾರ ಧ್ವನಿ ಮತದ ಮೂಲಕ ಅಂಗೀಕರಿಸಲಾಗಿದೆ. ಇದಕ್ಕೂ ಮುನ್ನ ವಿಧಾನ ಪರಿಷತ್ತಿನಲ್ಲಿ ಮಸೂದೆಯನ್ನು ಮಂಡಿಸಲಾಗಿತ್ತು. ಈ ವೇಳೆಗೆ ಕಾಂಗ್ರೆಸ್, ಜೆಡಿಎಸ್ ಸದಸ್ಯರು ಕಲಾಪ ಬಹಿಷ್ಕರಿಸಿ ಹೊರನಡೆದರು.
ಈ ಹಿಂದೆ ಕಾಂಗ್ರೆಸ್‌ನ ವಿರೋಧದ ನಡುವೆಯೇ ಈ ಮಸೂದೆಯನ್ನು ವಿಧಾನಸಭೆಯಲ್ಲಿ ಅಂಗೀಕರಿಸಲಾಗಿತ್ತು.
ಈ ಬಗ್ಗೆ ಸದನದಲ್ಲಿ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದ ನಾಯಕರು ಚರ್ಚೆ ನಡೆಸಿದ್ದಾರೆ.
ಈ ಕಾಯ್ದೆ ಬಲವಂತದ ಮತಾಂತರಗಳನ್ನು ಮಾತ್ರ ನಿರ್ಬಂಧಿಸುತ್ತದೆ ಎಂದು ಕಾನೂನು ಸಚಿವ ಜೆ.ಸಿ. ಮಾಧು ಸ್ವಾಮಿ ಸ್ಪಷ್ಟನೆ ನೀಡಿದರು.
ಸ್ವಯಂಪ್ರೇರಿತ ಮತಾಂತರವನ್ನು ತಡೆಯುವ ಯಾವುದೇ ತಿದ್ದುಪಡಿಗಳನ್ನು ನಾವು ಮಾಡಿಲ್ಲ. ಬಲವಂತದ ಮತಾಂತರವನ್ನು ನಿರ್ಬಂಧಿಸಲು ನಾವು ತಿದ್ದುಪಡಿಗಳನ್ನು ಮಾಡಿದ್ದೇವೆ. ನಾವು ನಮ್ಮ ಧರ್ಮವನ್ನು ರಕ್ಷಿಸುತ್ತಿದ್ದೇವೆ, ಬಲವಂತದ ಮತಾಂತರವನ್ನು ತಡೆಯಲು ನಾವು ಈ ಮಸೂದೆಯನ್ನು ತಂದಿದ್ದೇವೆ. ನಾವು ಯಾರ ಆಸೆಯನ್ನು ಎಲ್ಲಿಯೂ ನಿರ್ಬಂಧಿಸಿಲ್ಲ” ಎಂದು ಮಾಧು ಸ್ವಾಮಿ ಪರಿಷತ್ ನಲ್ಲಿ ಹೇಳಿದರು.
ಕಳೆದ ವರ್ಷ ಡಿಸೆಂಬರ್ ನಲ್ಲಿ ವಿಧಾನಸಭೆಯಲ್ಲಿ ಮಸೂದೆ ಅಂಗೀಕಾರವಾದರೂ ಬಹುಮತದ ಕೊರತೆಯಿಂದ ಪರಿಷತ್ತಿನಲ್ಲಿ ಮಂಡನೆಯಾಗಿರಲಿಲ್ಲ.